ADVERTISEMENT

ಲೆಬನಾನ್ ಮೇಲೆ ಇಸ್ರೇಲ್ ದಾಳಿ: 31 ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:14 IST
Last Updated 2 ಮಾರ್ಚ್ 2026, 16:14 IST
ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯ ಚಿತ್ರಣ
ಎಎಫ್‌ಪಿ ಚಿತ್ರ
ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯ ಚಿತ್ರಣ ಎಎಫ್‌ಪಿ ಚಿತ್ರ   

ದುಬೈ: ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 149 ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ ಮೂರನೇ ಎರಡರಷ್ಟು ಮಂದಿ ದಕ್ಷಿಣ ಲೆಬನಾನ್‌ಗೆ ಸೇರಿದವರು ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಹಿಜ್ಬುಲ್ಲಾ ಬಂಡುಕೋರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌, ಲೆಬನಾನ್‌ ಮೇಲೆ ಈ ವೈಮಾನಿಕ ದಾಳಿ ನಡೆಸಿದೆ.

ADVERTISEMENT

ಪಶ್ಚಿಮ ಏಷ್ಯಾದಲ್ಲಿ ಯುದ್ಧೋನ್ಮಾದ ಮುಂದುವರಿದಿದ್ದು, ದಾಳಿ– ಪ್ರತಿದಾಳಿ ನಡೆಯುತ್ತಿದೆ. ಕುವೈತ್‌ ಮೇಲೂ ದಾಳಿ ನಡೆಯುತ್ತಿದೆ. ‘ರಕ್ಷಣೆಗಾಗಿ ಮನೆಯೊಳಗೆ ಇರಿ. ರಾಯಭಾರ ಕಚೇರಿಗೆ ಬರಬೇಡಿ’ ಎಂದು ಅಮೆರಿಕವು ಅಲ್ಲಿರುವ ತನ್ನ ಪ್ರಜೆಗಳಿಗೆ ಸೂಚಿಸಿದೆ.

ಹಿಜ್ಬುಲ್ಲಾದಿಂದ ಕಾನೂನುಬಾಹಿರ ಕೃತ್ಯ

ಹಿಜ್ಬುಲ್ಲಾದ ಮಿಲಿಟರಿ ಚಟುವಟಿಕೆಗಳನ್ನು ಕಾನೂನುಬಾಹಿರ ಕೃತ್ಯಗಳೆಂದು ಪರಿಗಣಿಸಿದ್ದು, ಸಂಘಟನೆಯು ತನ್ನಲ್ಲಿರುವ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಬೇಕು ಎಂದು ಲೆಬನಾನ್ ಸರ್ಕಾರ ಹೇಳಿದೆ.

‘ಯುದ್ಧ ಮಾಡಬೇಕೆ ಅಥವಾ ಶಾಂತಿಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸುವುದು ನಮ್ಮ ಸರ್ಕಾರ ಮಾತ್ರ. ಹಿಜ್ಬುಲ್ಲಾದ ಎಲ್ಲ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ’ ಎಂದು ಲೆಬನಾನ್ ಪ್ರಧಾನಿ ನವಾಫ್ ಸಲಾಮ್‌ ತಿಳಿಸಿದ್ದಾರೆ.

ಸ್ಥಳಾಂತರಕ್ಕೆ ಸೂಚನೆ

ಜೆರುಸಲೇಂ: ದಕ್ಷಿಣ ಮತ್ತು ಪೂರ್ವ ಲೆಬನಾನ್‌ನ 16 ಸ್ಥಳಗಳಲ್ಲಿರುವ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್‌ ಮಿಲಿಟರಿ ಸೂಚಿಸಿದೆ. ‘ಕೆಲವು ಹಳ್ಳಿ ಹಾಗೂ ಪಟ್ಟಣಗಳಲ್ಲಿನ ಕಟ್ಟಡಗಳನ್ನು ಹಿಜ್ಬುಲ್ಲಾ ಬಂಡುಕೋರರು ಬಳಸಿಕೊಳ್ಳುತ್ತಿದ್ದಾರೆ. ತುರ್ತಾಗಿ ತೆರವುಗೊಳ್ಳುವಂತೆ ಇಲ್ಲಿರುವ ನಿವಾಸಿಗಳಿಗೆ 18 ಎಚ್ಚರಿಕೆಗಳನ್ನು ನೀಡಿದ್ದೇವೆ’ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.