ADVERTISEMENT

ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ರಾಯಿಟರ್ಸ್
Published 21 ನವೆಂಬರ್ 2024, 23:22 IST
Last Updated 21 ನವೆಂಬರ್ 2024, 23:22 IST
<div class="paragraphs"><p>ಗೌತಮ್ ಅದಾನಿ</p></div>

ಗೌತಮ್ ಅದಾನಿ

   

ನ್ಯೂಯಾರ್ಕ್‌/ನವದೆಹಲಿ: ಭಾರತದಲ್ಲಿ ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳ ಗುತ್ತಿಗೆಯನ್ನು ಸುಲಭವಾಗಿ ಪಡೆಯಲು ಅಧಿಕಾರಿಗಳಿಗೆ 25 ಕೋಟಿ ಡಾಲರ್‌ಗಳಷ್ಟು (ಅಂದಾಜು ₹2,100 ಕೋಟಿ) ಲಂಚ ನೀಡಿದ್ದಾರೆ ಇಲ್ಲವೆ ನೀಡಲು ಮುಂದಾಗಿದ್ದಾರೆ ಎಂದು ಗೌತಮ್‌ ಅದಾನಿ ಹಾಗೂ ಅವರ ಅಣ್ಣನ ಮಗ ಸಾಗರ್‌ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾ
ಗಿದೆ. ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್‌ ವಾರಂಟ್‌ ಹೊರಡಿಸಿದೆ.

ಅದಾನಿ ಸಮೂಹವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಇವು ನಿರಾಧಾರ ಎಂದು ಹೇಳಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಮೂಹ, ‘ಈ ಸಂಬಂಧ ಸಾಧ್ಯವಿರುವ ಎಲ್ಲ ರೀತಿಯ ಕಾನೂನು ಹೋರಾಟ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಕಳೆದ ವರ್ಷ, ಶಾರ್ಟ್‌ ಸೆಲ್ಲರ್ ಸಂಸ್ಥೆ ‘ಹಿಂಡನ್‌ಬರ್ಗ್ ರಿಸರ್ಚ್’ ಮಾಡಿದ ಆರೋಪಗಳಿಂದಾಗಿ ಅದಾನಿ ಸಮೂಹ ಭಾರಿ ಹಿನ್ನಡೆ ಅನುಭವಿಸಿತ್ತು. ಈಗ ಮತ್ತೊಂದು ಆರೋಪದ ಸುಳಿಗೆ ಸಿಲುಕಿದೆ.

ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ಈ ಆರೋಪಗಳನ್ನು ಮಾಡಿದ್ದು, ಈ ಸಂಬಂಧ ಗೌತಮ್ ಅದಾನಿ ಹಾಗೂ ಇತರ 7 ಜನರ ವಿರುದ್ಧ ಬ್ರೂಕ್‌ಲಿನ್‌ ಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಗೌತಮ್‌ ಅದಾನಿ, ಸಾಗರ್‌ ಅದಾನಿ ಅಲ್ಲದೇ, 2020ರಿಂದ 2023ರವರೆಗೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಿನೀತ್‌ ಜೈನ್‌, ಅಜ್ಯೂರ್ ಪವರ್‌ ಗ್ಲೋಬಲ್ ಲಿಮಿಟೆಡ್‌ನ ಸಿರಿಲ್‌ ಕ್ಯಾಬೆನ್ಸ್, ಮಾಜಿ ಸಿಇಒ ರಂಜಿತ್‌ ಗುಪ್ತಾ, ಮಾಜಿ ವಾಣಿಜ್ಯ ಅಧಿಕಾರಿ ರೂಪೇಶ್‌ ಅಗರವಾಲ್‌ ಸೇರಿದಂತೆ ಏಳು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಭಾರತದ ಅಧಿಕಾರಿಗಳು ಹಾಗೂ ‘ಸೆಬಿ’ ಪ್ರತಿಕ್ರಿಯೆ ನೀಡಿಲ್ಲ. ಅಜ್ಯೂರ್‌ ಪವರ್‌ ಕಂಪನಿಯೂ ಪ್ರತಿಕ್ರಿಯೆ ನೀಡಿಲ್ಲ.

ಈ ಗುತ್ತಿಗೆಗಳನ್ನು ಪಡೆಯಲು, 2020 ಮತ್ತು 2024ರ ನಡುವೆ, ಭಾರತೀಯ ಅಧಿಕಾರಿಗಳಿಗೆ 250 ದಶಲಕ್ಷ ಡಾಲರ್‌ನಷ್ಟು (ಅಂದಾಜು ₹2,100 ಕೋಟಿ) ಲಂಚ ನೀಡಲಾಗಿತ್ತು ಇಲ್ಲವೇ ಲಂಚ ನೀಡುವ ಯೋಜನೆ ರೂಪಿಸಲಾಗಿತ್ತು. ಈ ಗುತ್ತಿಗೆಗಳಿಂದ ಮುಂದಿನ 20 ವರ್ಷಗಳಲ್ಲಿ ತೆರಿಗೆ ಪಾವತಿಸಿದ ನಂತರ, ಅಂದಾಜು 200 ಕೋಟಿ ಡಾಲರ್‌ನಷ್ಟು ಲಾಭ ಸಿಗಲಿದೆ ಎಂಬುದಾಗಿ ಬಿಂಬಿಸಿ, ಹೂಡಿಕೆದಾರರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

‘ಅದಾನಿ ಹಾಗೂ ಇತರ ಆರೋಪಿಗಳು ಭ್ರಷ್ಟಾಚಾರ ಮತ್ತು ವಂಚನೆ ಮಾರ್ಗದ ಮೂಲಕ ಭಾರತದ ವಿವಿಧ ರಾಜ್ಯಗಳಲ್ಲಿ ವಿದ್ಯುತ್‌ ಪೂರೈಕೆ ಗುತ್ತಿಗೆ ಪಡೆದು, ಆ ಮೂಲಕ ಅಮೆರಿಕದ ಹೂಡಿಕೆದಾರರಿಗೆ ನಷ್ಟ ಉಂಟು ಮಾಡಿದ್ದಾರೆ’ ಎಂದು ಅಮೆರಿಕದ ಡೆಪ್ಯುಟಿ ಅಸಿಸ್ಟೆಂಟ್‌ ಅಟಾರ್ನಿ ಜನರಲ್ ಲಿಸಾ ಮಿಲ್ಲರ್‌ ಹೇಳಿದ್ದಾರೆ.

‘ಅಮೆರಿಕದ ಷೇರು ಮಾರುಕಟ್ಟೆಗಳ ಸಮಗ್ರತೆಯನ್ನು ದುರುಪಯೋಗಪಡಿಸಿ
ಕೊಳ್ಳುವ ಮೂಲಕ ತಾವು ಶ್ರೀಮಂತರಾಗಲು ಪ್ರತಿವಾದಿಗಳು ವ್ಯಾಪಕ ಯೋಜ
ನೆಯನ್ನೇ ರೂಪಿಸಿದ್ದರು’ ಎಂದು ಅಮೆರಿಕದ ಅಟಾರ್ನಿ ಬ್ರೆಯಾನ್‌ ಪೀಸ್‌ ಹೇಳಿದ್ದಾರೆ.‌ ಅದಾನಿ ಒಡೆತನದ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ ಹಾಗೂ ಮತ್ತೊಂದು ಕಂಪನಿಯು 12 ಗಿಗಾವಾಟ್‌ ಸೌರವಿದ್ಯುತ್‌ ಅನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿವೆ. ಈ ಕಂಪನಿಗಳಲ್ಲಿ ಹೂಡಿಕೆ ಮಾಡಿರುವವರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

2020–21ರ ಕೃತ್ಯ: ‘ನಮ್ಮ ಕಂಪನಿಯು (ಅದಾನಿ ಗ್ರೀನ್‌ ಎನರ್ಜಿ ಲಿ.) ಲಂಚ ವಿರೋಧಿ ನೀತಿಯನ್ನು ಹೊಂದಿದೆ. ಕಂಪನಿಯ ಆಡಳಿತ ಮಂಡಳಿಯು ಯಾರಿಗೂ ಲಂಚ ನೀಡುವುದಿಲ್ಲ ಅಥವಾ ಲಂಚ ನೀಡುವ ಕುರಿತು ವಾಗ್ದಾನ ಮಾಡುವುದಿಲ್ಲ. ಕಂಪನಿಯ ಬಾಂಡ್‌ಗಳಲ್ಲಿ ಹಣ ತೊಡಗಿಸಿ’ ಎಂದು ಗೌತಮ್‌ ಅದಾನಿ ಹಾಗೂ ಸಾಗರ್ ಅದಾನಿ ಹೂಡಿಕೆದಾರರ ಮನವೊಲಿಸಿದ್ದರು’ ಎಂಬ ಆರೋಪಗಳಿವೆ. ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್‌ ಕಮಿಷನ್‌ನ (ಎಸ್‌ಇಸಿ) ಜಾರಿ ವಿಭಾಗದ ಹಂಗಾಮಿ ನಿರ್ದೇಶಕ ಸಂಜಯ್‌ ವಾಧ್ವಾ ಈ ಕುರಿತು ಮಾಹಿತಿ ನೀಡಿದ್ದಾರೆ.

‘ಅದಾನಿ ಹಾಗೂ ಇತರ ಆರೋಪಿಗಳು ಲಂಚ ನೀಡುವ ಯೋಜನೆಯನ್ನು 2020 ಅಥವಾ 2021ರಲ್ಲಿ ಆರಂಭಿಸಿದ್ದರು. ದೇಶದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ಭಾರತೀಯ ಸೌರ ವಿದ್ಯುತ್‌ ನಿಗಮಕ್ಕಾಗಿ ವಿದ್ಯುತ್‌ ಉತ್ಪಾದಿಸಿ ಕೊಡುವ ಭರವಸೆ ನೀಡುವ ಮೂಲಕ ಗುತ್ತಿಗೆ ಪಡೆದಿದ್ದರು’ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ ಹೇಳಿದ್ದಾರೆ.

‘ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ ನಂತರ, 2021 ಮತ್ತು 2022ರಲ್ಲಿ ಅದಾನಿ ಗ್ರೀನ್‌ ಮತ್ತು ಅಜ್ಯೂರ್ ಪವರ್‌ ಗ್ಲೋಬಲ್ ಕಂಪನಿಗಳು ಭಾರತದ ಐದು ರಾಜ್ಯಗಳು ಅಥವಾ ಪ್ರದೇಶಗಳ ವಿದ್ಯುತ್‌ ವಿತರಣಾ ಸಂಸ್ಥೆಗಳೊಂದಿಗೆ ವಿದ್ಯುತ್‌ ಖರೀದಿ ಸಂಬಂಧ ಒಪ್ಪಂದ ಮಾಡಿಕೊಂಡಿದ್ದವು’ ಎಂದೂ ಹೇಳಿದ್ದಾರೆ.

‘ಈ ಭರವಸೆಗಳೊಂದಿಗೆ ಅದಾನಿ ಗ್ರೀನ್‌ ಕಂಪನಿಯು ಅಮೆರಿಕದ ಹೂಡಿಕೆದಾರರಿಂದ 1750 ಲಕ್ಷ ಡಾಲರ್‌ ಸೇರಿದಂತೆ 7500 ಲಕ್ಷ ಡಾಲರ್‌ ಸಂಗ್ರಹಿಸಿದೆ. ಅಮೆರಿಕದಲ್ಲಿ ಈ ಬೃಹತ್‌ ಮೊತ್ತ ಸಂಗ್ರಹಕ್ಕೆ ನೆರವಾಗಿರುವ ಅಜ್ಯೂರ್ ಪವರ್ ಕಂಪನಿಯು ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿದೆ’ ಎಂದು ಎಸ್‌ಇಸಿ ತಿಳಿಸಿದೆ.

ಆರೋಪಗಳೇನು?

* ಗೌತಮ್‌ ಅದಾನಿ ಅವರೇ ಖುದ್ದಾಗಿ ಭಾರತದ ಅಧಿಕಾರಿಯನ್ನು ಹಲವು ಬಾರಿ ಭೇಟಿ ಮಾಡಿ, ಲಂಚ ನೀಡುವ ಕುರಿತು ಮಾತುಕತೆ ನಡೆಸಿದ್ದರು. ಇತರ ಆರೋಪಿಗಳು ಸಭೆಗಳನ್ನು ನಡೆಸಿ, ಲಂಚ ನೀಡುವ ಯೋಜನೆಯನ್ನು ಯಾವ ರೀತಿ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದರು

* ಆರೋಪಗಳ ಕುರಿತ ತನಿಖೆಗೆ ಅಡ್ಡಿಪಡಿಸಲು ಆರೋಪಿಗಳು ಪ್ರಯತ್ನಿಸಿದ್ದರು

* ವಿನೀತ್‌ ಜೈನ್‌ ಸಾಲ ಮತ್ತು ಬಾಂಡ್‌ಗಳ ರೂಪದಲ್ಲಿ 300 ಕೋಟಿ ಡಾಲರ್‌ಗೂ ಅಧಿಕ ಹಣ ಸಂಗ್ರಹಿಸಿದ್ದಾರೆ. ಆದರೆ, ತಾವು ಮಾಡಿದ ಭ್ರಷ್ಟಾಚಾರವನ್ನು ಸಾಲ ನೀಡಿದವರು ಹಾಗೂ ಹೂಡಿಕೆದಾರರಿಂದ ಮುಚ್ಚಿಟ್ಟಿದ್ದಾರೆ 

* ಆಂಧ್ರ ಪ್ರದೇಶ ಹಾಗೂ ಇತರ ಕೆಲ ರಾಜ್ಯಗಳ ಅಧಿಕಾರಿಗಳಿಗೆ ಸಾಗರ್‌ ಅದಾನಿ ಲಂಚ ನೀಡಿದ್ದಾರೆ

ಪರಿಣಾಮಗಳೇನು?

* ಭಾರತದ ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗಿರುವ ಅದಾನಿ ಸಮೂಹದ 10 ಕಂಪನಿ ಷೇರುಗಳ ಮೌಲ್ಯದಲ್ಲಿ ಗುರುವಾರ ಭಾರಿ ಕುಸಿತ ಕಂಡುಬಂತು. ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ  ಅಂದಾಜು ₹2.19 ಲಕ್ಷ ಕೋಟಿ ನಷ್ಟ 

* 60 ಕೋಟಿ ಡಾಲರ್‌ ಮೌಲ್ಯದ ಬಾಂಡ್‌ಗಳ ಪ್ರಸ್ತಾವಿತ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅದಾನಿ ಗ್ರೀನ್‌ ಎನರ್ಜಿ ತಿಳಿಸಿದೆ

* ಅದಾನಿ ಸಮೂಹದ ಜೊತೆ ಇಂಧನ ಸಚಿವಾಲಯವು ಮಾಡಿಕೊಂಡಿರುವ 70 ಕೋಟಿ ಡಾಲರ್‌ ಮೊತ್ತದ ಒಪ್ಪಂದವನ್ನು ರದ್ದುಗೊಳಿಸಲು ನಿರ್ದೇಶನ ನೀಡಿದ್ದಾಗಿ ಕೆನ್ಯಾ ಅಧ್ಯಕ್ಷ ವಿಲಿಯಮ್ ರುಟೊ ಹೇಳಿದ್ದಾರೆ

* ದೇಶದ ಪ್ರಮುಖ ವಿಮಾನನಿಲ್ದಾಣದ ವಿಸ್ತರಣೆಗೆ ಸಂಬಂಧಿಸಿ ಅದಾನಿ ಸಮೂಹಕ್ಕೆ ಗುತ್ತಿಗೆ ನೀಡಲು ಸಿದ್ಧಪಡಿಸಿರುವ ಪ್ರಸ್ತಾವವನ್ನು ರದ್ದುಪಡಿಸಲು ಕೂಡ ವಿಲಿಯಮ್ ರುಟೊ ಆದೇಶಿಸಿದ್ದಾರೆ

ಗೌತಮ್‌ ಅದಾನಿ, ಸಾಗರ್‌ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ ಬಂಧನ ವಾರಂಟ್ ಜಾರಿ ಮಾಡಿದೆ. ಅಮೆರಿಕದ ಅಧಿಕಾರಿಗಳು ಭಾರತ ಸರ್ಕಾರವನ್ನು ಸಂಪರ್ಕಿಸಬೇಕು. ಅರೋಪಿಗಳ ಹಸ್ತಾಂತರಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಭಾರತದ ನಡುವೆ ಈಗಾಗಲೇ ಒಪ್ಪಂದ ಇದೆ
ದೇವಪ್ರಿಯ ಮೌಲಿಕ್‌, ಕ್ರಿಮಿನಲ್‌ ವಕೀಲ, ದೆಹಲಿ
ಭಾರತವು ಅದಾನಿ ಹಿಡಿತದಲ್ಲಿದೆ. ಅದಾನಿ ಭಾರತವನ್ನು ನಿಯಂತ್ರಿಸುತ್ತಿದ್ದಾರೆ... ಅದಾನಿ ಅವರನ್ನು ತಕ್ಷಣವೇ ಬಂಧಿಸಬೇಕು. ಪ್ರಧಾನಿಯವರು ಅದಾನಿ ಅವರನ್ನು ರಕ್ಷಿಸುತ್ತಿರುವುದು ಸ್ಪಷ್ಟ. ಈ ವಿಷಯ ಪ್ರಸ್ತಾಪಿಸುವುದು ನನ್ನ ಹೊಣೆ
ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.