ADVERTISEMENT

ಪೆಲೊಸಿ ತೈವಾನ್ ಭೇಟಿ: ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಚೀನಾ

ಪಿಟಿಐ
Published 2 ಆಗಸ್ಟ್ 2022, 17:06 IST
Last Updated 2 ಆಗಸ್ಟ್ 2022, 17:06 IST
   

ಬೀಜಿಂಗ್: ತೈವಾನ್‌ಗೆ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿಯನ್ನು ತೀವ್ರವಾಗಿ ಖಂಡಿಸಿರುವ ಚೀನಾ, ಅವರ ಭೇಟಿಯು ದ್ವಿಪಕ್ಷೀಯ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಭಂಗ ತರಲಿದೆ ಎಂದು ಮಂಗಳವಾರ ಎಚ್ಚರಿಸಿದೆ.

ಪೆಲೊಸಿ ಭೇಟಿಗೆ ಪ್ರತಿಯಾಗಿ ಚೀನಾ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗೆ ಯೋಜಿಸಿದೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ವರದಿ ಮಾಡಿದೆ.

ಅಮೆರಿಕದ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳ ಪ್ರಕಾರ, ಪೆಲೋಸಿ ಮಂಗಳವಾರ ರಾತ್ರಿ ತೈಪೆಗೆ ಬಂದಿಳಿದರು. ಅವರು 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದಾರೆ.

ಪೆಲೊಸಿ, ತೈವಾನ್‌ಗೆ ಆಗಮಿಸಿದ ಬೆನ್ನಲ್ಲೇ, ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನ್ಯಾನ್ಸಿ ಅವರ ಭೇಟಿಯು ‘ಚೀನಾ ಏಕತೆ ತತ್ವ ಮತ್ತು ಚೀನಾ-ಅಮೆರಿಕದ ಜಂಟಿ ಸಂವಹನಗಳ ನಿಬಂಧನೆಗಳ ಪೈಕಿ 3 ನಿಬಂಧನೆಗಳ ಗಂಭೀರ ಉಲ್ಲಂಘನೆಯಾಗಿದೆ’ಎಂದು ಹೇಳಿದೆ.

ADVERTISEMENT

‘ಇದು ಚೀನಾ-ಅಮೆರಿಕದ ಸಂಬಂಧಗಳ ರಾಜಕೀಯ ಅಡಿಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಚೀನಾದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ. ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಗಂಭೀರವಾಗಿ ಹಾಳುಮಾಡುತ್ತದೆ. ಪ್ರತ್ಯೇಕತಾವಾದಿ ಶಕ್ತಿಗಳಿಗೆ ತೈವಾನ್‌ ಸ್ವಾತಂತ್ರ್ಯಕ್ಕಾಗಿ ಗಂಭೀರ ತಪ್ಪು ಸಂಕೇತವನ್ನು ಕಳುಹಿಸುತ್ತದೆ. ಚೀನಾ ಇದನ್ನು ದೃಢವಾಗಿ ವಿರೋಧಿಸುತ್ತದೆ ಹಾಗೂ ಕಠಿಣವಾಗಿ ಖಂಡಿಸುತ್ತದೆ’ಎಂದು ಅದು ಹೇಳಿದೆ.

ಪ್ರಪಂಚದಲ್ಲಿ ಒಂದೇ ಚೀನಾ ಇದೆ. ತೈವಾನ್ ಚೀನಾದ ಭೂಪ್ರದೇಶದ ಅವಿಭಾಜ್ಯ ಭಾಗವಾಗಿದೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸರ್ಕಾರವು ಇಡೀ ಚೀನಾವನ್ನು ಪ್ರತಿನಿಧಿಸುವ ಏಕೈಕ ಕಾನೂನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.

ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ನಿರ್ಣಯದ ಮೂಲಕ ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು 181 ದೇಶಗಳು ಏಕ-ಚೀನಾ ತತ್ವದ ಆಧಾರದ ಮೇಲೆ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿವೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.