ADVERTISEMENT

ಆಕ್ಸ್‌ಫರ್ಡ್‌-ಅಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಶೇ. 70ರಷ್ಟು ಪರಿಣಾಮಕಾರಿ

ಏಜೆನ್ಸೀಸ್
Published 23 ನವೆಂಬರ್ 2020, 10:00 IST
Last Updated 23 ನವೆಂಬರ್ 2020, 10:00 IST
ಬ್ರಿಟಷ್‌ ಔಷಧ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕಾ ತಯಾರಿಸುತ್ತಿರುವ ಕೋವಿಡ್‌ ಲಸಿಕೆಯ ಪ್ರಾತಿನಿಧಿಕ ಚಿತ್ರ ( ಎಎಫ್‌ಪಿ ಚಿತ್ರ)
ಬ್ರಿಟಷ್‌ ಔಷಧ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕಾ ತಯಾರಿಸುತ್ತಿರುವ ಕೋವಿಡ್‌ ಲಸಿಕೆಯ ಪ್ರಾತಿನಿಧಿಕ ಚಿತ್ರ ( ಎಎಫ್‌ಪಿ ಚಿತ್ರ)   

ಲಂಡನ್‌: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌-19 ಲಸಿಕೆಯ ಮಧ್ಯಂತರ ವರದಿಯನ್ನು ಬ್ರಿಟಿಷ್‌ ಔಷಧ ತಯಾರಕ ಸಂಸ್ಥೆ ಅಸ್ಟ್ರಾಜೆನೆಕಾ ಸೋಮವಾರ ಬಹಿರಂಗಪಡಿಸಿದೆ. ಕೊರೊನಾ ವೈರಸ್‌ ಅನ್ನು ತಡೆಗಟ್ಟುವಲ್ಲಿ ಲಸಿಕೆಯು ಸರಾಸರಿ 70 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಸ್ಟ್ರಾಜೆನೆಕಾ ಹೇಳಿದೆ.

ಲಸಿಕೆಯ ಎರಡು ಡೋಸೇಜ್‌ಗಳನ್ನು ನೀಡಿದಾಗ ಒಂದರಲ್ಲಿ ಶೇ. 62ರಷ್ಟು, ಮತ್ತೊಂದರಲ್ಲಿ ಶೇ. 90ರಷ್ಟು ಪರಿಣಾಮಕಾರಿತ್ವ ಕಂಡು ಬಂದಿದೆ ಎಂದು ಅದು ಮಾಹಿತಿ ನೀಡಿದೆ.

'ಕೋವಿಡ್ -19 ವಿರುದ್ಧದ ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಲಿದೆ ಮತ್ತು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಎಂಬುದು ಖಚಿತವಾಗಿದೆ,' ಎಂದು ಎಂದು ಅಸ್ಟ್ರಾಜೆನೆಕಾ ಮುಖ್ಯ ಕಾರ್ಯನಿರ್ವಾಹಕ ಪ್ಯಾಸ್ಕಲ್ ಸೊರಿಯೊಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಕೊರೊನಾವೈರಸ್ ಲಸಿಕೆ ಪ್ರಯೋಗದ ಪ್ರತಿಸ್ಪರ್ಧಿಗಳಾದ ಫಿಜರ್/ಬಯೋಎನ್ಟೆಕ್ ಮತ್ತು ಮೊಡೆರ್ನಾ ಸಂಸ್ಥೆಗಳ ಶೇ. 90 ಪರಿಣಾಮಕಾರಿತ್ವದ ಲಸಿಕೆಗಳಿಗೆ ಹೋಲಿಸಿದರೆ, ಆಕ್ಸ್‌ಫರ್ಡ್‌ ಲಸಿಕೆಯ ಪರಿಣಾಮಕಾರಿತ್ವ ಕಡಿಮೆ ಇದೆ.

'ಬ್ರಿಟನ್‌ ಮತ್ತು ಬ್ರೆಜಿಲ್‌ನಲ್ಲಿ ನಡೆದ ಕೊರೊನಾ ವೈರಸ್‌ ಲಸಿಕೆ AZD1222 ನ ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ವರದಿಯ ವಿಶ್ಲೇಷಣೆಯಿಂದ ಸಕಾರಾತ್ಮಕ ಮತ್ತು ಉನ್ನತ ಮಟ್ಟದ ಫಲಿತಾಂಶಗಳು ಲಭ್ಯವಾಗಿವೆ. ಕೋವಿಡ್ -19 ಅನ್ನು ತಡೆಗಟ್ಟುವಲ್ಲಿ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಗೊತ್ತಾಗಿದೆ. ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಕಂಡು ಬಂದಿಲ್ಲ,' ಎಂದು ಅಸ್ಟ್ರಾಜೆನೆಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಒಂದು ತಿಂಗಳ ಅಂತರದಲ್ಲಿ ನೀಡಲಾದ ಲಸಿಕೆಯ ಒಂದು ಡೋಸ್‌ (ಎರಡು ಬಾರಿ) ಶೇ. 90ರಷ್ಟು ಪರಿಣಾಮಕಾರಿತ್ವ ತೋರಿಸಿತು. ನಂತರ ಒಂದು ತಿಂಗಳ ಅಂತರದಲ್ಲಿ ನೀಡಲಾದ ಮತ್ತೊಂದು ಡೋಸ್‌ ಶೇ. 62ರಷ್ಟು ಪರಿಣಾಮಕಾರಿಯಾಗಿದೆ. ಈ ಎರಡೂ ಡೋಸ್‌ಗಳ ಸರಾಸರಿ ಪರಿಣಾಮಕಾರಿತ್ವ ಶೇ. 70ರಷ್ಟು ಆಗಿದೆ ಎಂದು ಅಸ್ಟ್ರಾಜೆನೆಕಾ ತಿಳಿಸಿದೆ.

ಅಲ್ಲದೆ, ಲಸಿಕೆಯ ದತ್ತಾಂಶವನ್ನು ವಿಶ್ವದ ಎಲ್ಲ ಔಷಧ ನಿಯಂತ್ರಕ ಸಂಸ್ಥೆಗಳಿಗೆ ನೀಡುವುದಾಗಿ ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.