ADVERTISEMENT

ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಪರಿಣಾಮಕಾರಿಯೇ? ಪ್ರಯೋಗ ಪುನರಾರಂಭ ಯಾವಾಗ?

ರಾಯಿಟರ್ಸ್
Published 10 ಸೆಪ್ಟೆಂಬರ್ 2020, 10:45 IST
Last Updated 10 ಸೆಪ್ಟೆಂಬರ್ 2020, 10:45 IST
ಕೋವಿಡ್‌ ಲಸಿಕೆ ಪ್ರಯೋಗ–ಪ್ರಾತಿನಿಧಿಕ ಚಿತ್ರ
ಕೋವಿಡ್‌ ಲಸಿಕೆ ಪ್ರಯೋಗ–ಪ್ರಾತಿನಿಧಿಕ ಚಿತ್ರ   

ಜ್ಯೂರಿಕ್/ಫ್ರಾಂಕ್‌ಫರ್ಟ್‌: ಕೋವಿಡ್‌–19 ಚಿಕಿತ್ಸೆಗಾಗಿ ನಡೆಸಲಾಗುತ್ತಿರುವ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಶೀಘ್ರದಲ್ಲೇ ಪುನರಾರಂಭವಾದರೆ, ಲಸಿಕೆಯು ಜನರನ್ನು ಕೋವಿಡ್‌–19ನಿಂದ ರಕ್ಷಿಸಲು ಸಮರ್ಥವಾಗಿದೆಯೇ ಎಂಬುದನ್ನು ಇದೇ ವರ್ಷದ ಅಂತ್ಯಕ್ಕೆ ಖಚಿತಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಕಂಪನಿಯ ಸಿಇಒ ಪಾಸ್ಕಲ್‌ ಸಾರಿಯೊಟ್‌ ಹೇಳಿದ್ದಾರೆ.

ಬ್ರಿಟಿಷ್‌ ಫಾರ್ಮಾ ಕಂಪನಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯ ಅಂತಿಮ ಹಂತದ ಪ್ರಯೋಗಗಳನ್ನು ಇತ್ತೀಚೆಗಷ್ಟೇ ಸ್ಥಗಿತಗೊಳಿಸಿದೆ. ಬ್ರಿಟನ್‌ನಲ್ಲಿ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಬೆನ್ನು ಹುರಿಯಲ್ಲಿ ಉರಿಯೂತ (transverse myelitis) ಕಾಣಿಸಿಕೊಂಡಿರುವುದು ವರದಿಯಾದ ಬೆನ್ನಲ್ಲೇ ಲಸಿಕೆ ಪ್ರಯೋಗ ನಿಲ್ಲಿಸಲಾಗಿದೆ.

ಆನ್‌ಲೈನ್‌ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಪಾಸ್ಕಲ್‌, ಬೆನ್ನು ಹುರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ. ಹಲವು ಪರೀಕ್ಷೆಗಳ ಬಳಿಕ ಅದು ಸ್ಪಷ್ಟವಾಗಲಿದ್ದು, ಪರೀಕ್ಷಾ ವರದಿಯನ್ನು ಸುರಕ್ಷತಾ ವಿಚಾರಗಳನ್ನು ಗಮನಿಸುವ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಅನಂತರವಷ್ಟೇ ಕಂಪನಿ ಮತ್ತೆ ಲಸಿಕೆಯ ಪ್ರಯೋಗ ಪುನರಾರಂಭಿಸುವ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ADVERTISEMENT

'ಇತರೆ ಲಸಿಕೆಗಳ ಪ್ರಯೋಗಗಳಿಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ, ಇಡೀ ಜಗತ್ತು ಅವುಗಳನ್ನೆಲ್ಲ ಗಮನಿಸುತ್ತಿಲ್ಲ. ಅವರು ಪ್ರಯೋಗ ನಿಲ್ಲಿಸುತ್ತಾರೆ, ಅಧ್ಯಯನ ನಡೆಸುತ್ತಾರೆ ಹಾಗೂ ಮತ್ತೆ ಆರಂಭಿಸುತ್ತಾರೆ' ಎಂದು ಹೇಳಿದ್ದಾರೆ.

ಆಸ್ಟ್ರಾಜೆನೆಕಾ ಎಲ್ಲ ರಾಷ್ಟ್ರಗಳಿಗೂ ಒಂದೇ ಸಮಯದಲ್ಲಿ ಲಸಿಕೆ ಪೂರೈಕೆ ಮಾಡುವ ಮೂಲಕ ಸಮಾನ ವಿತರಣೆಯ ಬಗ್ಗೆ ಗಮನ ನೀಡಲಿದೆ. ಕಂಪನಿ ಜಗತ್ತಿನಾದ್ಯಂತ ಸ್ಥಾಪಿಸಿರುವ ಕೇಂದ್ರಗಳ ಮೂಲಕ ಒಟ್ಟು 300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಪಾಸ್ಕಲ್‌ ವಿವರಿಸಿದ್ದಾರೆ.

ಲಸಿಕೆ ಪ್ರಯೋಗ ನಿಲ್ಲಿಸಿರುವುದರಿಂದ ಕೋವಿಡ್‌ ಚಿಕಿತ್ಸೆಗೆ ಲಸಿಕೆ ಹೊರ ಬರುವ ಸಮಯದ ಬಗ್ಗೆ ಅನುಮಾನಗಳು ಮೂಡಿದ್ದರ ಪರಿಣಾಮ ಆಸ್ಟ್ರಾಜೆನೆಕಾ ಷೇರು ಬೆಲೆ ಬುಧವಾರ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.