ADVERTISEMENT

ಪಾಕಿಸ್ತಾನ | ಪ್ರವಾಹ ಸಂತ್ರಸ್ತರು ತೆರಳುತ್ತಿದ್ದ ಬಸ್‌ಗೆ ಬೆಂಕಿ: 17 ಮಂದಿ ಸಾವು

ಏಜೆನ್ಸೀಸ್
Published 13 ಅಕ್ಟೋಬರ್ 2022, 1:52 IST
Last Updated 13 ಅಕ್ಟೋಬರ್ 2022, 1:52 IST
   

ಕರಾಚಿ: ದಕ್ಷಿಣ ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರು ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಬಿದ್ದು 17ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದುರಂತ ಬುಧವಾರ ರಾತ್ರಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಧ್‌ ಪ್ರಾಂತ್ಯದ ಹೈದರಾಬಾದ್‌ ಹಾಗೂ ಜಂಶೋರೊ ನಗರಗಳೊಂದಿಗೆಬಂದರು ನಗರ ಕರಾಚಿಗೆ ಸಂಪರ್ಕ ಕಲ್ಪಿಸುವ ಎಂ–9 ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.

ಈ ವರೆಗೆ 17 ಪ್ರಯಾಣಿಕರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸದೀಯ ಆರೋಗ್ಯ ಕಾರ್ಯದರ್ಶಿ ಸಿರಾಜ್‌ ಖ್ವಾಸಿಂ ಮಾಹಿತಿ ನೀಡಿದ್ದಾರೆ.

ADVERTISEMENT

ಬಸ್‌ನಲ್ಲಿ 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದವರು. ಅವರೆಲ್ಲ ಖಾಸಗಿ ವಾಹನದ ಮೂಲಕ ದಾದು ಜಿಲ್ಲೆಗೆ ವಾಪಸ್‌ ಆಗುತ್ತಿದ್ದರು ಎಂದು ಜಂಶೋರೊ ಜಿಲ್ಲಾ ಕಮಿಷನರ್‌ ಆಸಿಫ್‌ ಜಮೀಲ್‌ ಹೇಳಿದ್ದಾರೆ.

ಸಿಂಧ್‌ ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ ಅತ್ಯಂತ ಹಾನಿಗೊಳಗಾದ ಜಿಲ್ಲೆಗಳಲ್ಲಿ ದಾದು ಸಹ ಒಂದಾಗಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ. ಆದರೆ, ಬಸ್‌ನ ಹಿಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಸಂಪೂರ್ಣವಾಗಿ ಆವರಿಸಿದೆ.ಬಸ್‌ನಿಂದ ಜಿಗಿದು ಕೆಲವರು ಪ್ರಾಣ ಉಳಿಸಿಕೊಂಡಿದ್ದಾರೆ.

ಪಂಜಾಬ್ ಪ್ರಾಂತ್ಯದಮುಲ್ತಾನ್–ಸುಕ್ಕೂರ್ ಹೆದ್ದಾರಿಯಲ್ಲಿ ಬಸ್ ಹಾಗೂ ತೈಲಟ್ಯಾಂಕರ್ ನಡುವೆ ಭೀಕರ ಡಿಕ್ಕಿ ಸಂಭವಿಸಿ 20 ಜನ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದ ಪ್ರಕರಣ ಆಗಸ್ಟ್‌ನಲ್ಲಿ ವರದಿಯಾಗಿತ್ತು.

ಮುಖ್ಯವಾಗಿ ವೇಗದ ಚಾಲನೆ, ಕಳಪೆ ರಸ್ತೆಗಳು ಮತ್ತು ಪ್ರಯಾಣಕ್ಕೆ ಯೋಗ್ಯವಲ್ಲದ ವಾಹನಗಳ ಬಳಕೆಯ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತಗಳುಸಾಮಾನ್ಯ ಎನ್ನುವಂತೆ ಘಟಿಸುತ್ತಿರುತ್ತವೆ.

2017ರಲ್ಲಿ ತೈಲ ಟ್ಯಾಂಕರ್‌ವೊಂದು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.