ADVERTISEMENT

ಕಾಂಗೋ ಸಂಘರ್ಷ: ಕನಿಷ್ಠ 36 ಜನರನ್ನು ಕೊಂದ ಬಂಡುಕೋರರು

ಏಜೆನ್ಸೀಸ್
Published 10 ಮಾರ್ಚ್ 2023, 11:23 IST
Last Updated 10 ಮಾರ್ಚ್ 2023, 11:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗೋಮಾ (ಕಾಂಗೋ): ಸಂಘರ್ಷ ಪೀಡಿತ ಪೂರ್ವ ಕಾಂಗೋದಲ್ಲಿ ಬಂಡುಕೋರರು ಕನಿಷ್ಠ 36 ಜನರನ್ನು ಹತ್ಯೆಗೈದಿದ್ದಾರೆ ಎಂದು ಕಾಂಗೋ ಮಿಲಿಟರಿ ತಿಳಿಸಿದೆ.

ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಬಂಡುಕೋರರು, ಉತ್ತರ ಕಿವು ಪ್ರಾಂತ್ಯದ ಮುಕೊಂಡಿ ಗ್ರಾಮದಲ್ಲಿ ನಾಗರಿಕರನ್ನು ಕೊಂದಿದ್ದಾರೆ ಎಂದು ಕಾಂಗೋ ಮಿಲಿಟರಿ ಕ್ಯಾಪ್ಟನ್ ಆಂಥೋನಿ ಹೇಳಿದ್ದಾರೆ.

ಈ ಸಂಘರ್ಷ ಬುಧವಾರ ರಾತ್ರಿ ನಡೆದಿದ್ದು ಹಲವರು ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವರು ನಾಪತ್ತೆಯಾಗಿದ್ದು, ಪತ್ತೆಗೆ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಘರ್ಷಣೆ ಪ್ರಾರಂಭವಾಗಿತ್ತು. ಬಂಡುಕೋರರು ಬಂದೂಕುಗಳು ಮತ್ತು ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿ ಜನರನ್ನು ನಿರ್ದಯವಾಗಿ ಕೊಲ್ಲಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಒಕ್ಕೂಟದ 120ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳು ಅಧಿಕಾರ, ಸಂಪನ್ಮೂಲ ಮತ್ತು ಕೆಲವು ಸಮುದಾಯಗಳನ್ನು ರಕ್ಷಿಸಲು ಹೋರಾಡುತ್ತಿರುವ ಕಾರಣ ಪೂರ್ವ ಕಾಂಗೋದಲ್ಲಿ ದಶಕಗಳಿಂದ ಘರ್ಷಣೆಯು ನಡೆಯುತ್ತಿದೆ. ಹೆಚ್ಚಾಗಿ ಉತ್ತರ ಕಿವು ಪ್ರಾಂತ್ಯದಲ್ಲಿ ಈ ಒಕ್ಕೂಟ ಸಕ್ರಿಯವಾಗಿದ್ದು, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ.

ನಾಗರಿಕರು ಮತ್ತು ಮಕ್ಕಳ ಅಪಹರಣ, ಅತ್ಯಾಚಾರ ಇವೇ ಮುಂತಾದ ದುಷ್ಕೃತ್ಯಗಳಲ್ಲಿ ಬಂಡುಕೋರರ ಗುಂಪುಗಳು ತೊಡಗಿವೆ ಎಂದು ವಿಶ್ವಸಂಸ್ಥೆ ಆರೋಪಿಸಿತ್ತು. ಈ ಗುಂಪಿನ ನಾಯಕನ ಬಗ್ಗೆ ಸುಳಿವು ನೀಡಿದವರಿಗೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಈ ತಿಂಗಳ ಆರಂಭದಲ್ಲಿ ಅಮೆರಿಕ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.