ADVERTISEMENT

ಟೆಕ್ಸಾಸ್‌: ಟ್ರ್ಯಾಕ್ಟರ್ ಟ್ರೇಲರ್‌ನಲ್ಲಿ ಕನಿಷ್ಠ 40 ಅಕ್ರಮ ವಲಸಿಗರ ಶವ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2022, 3:05 IST
Last Updated 28 ಜೂನ್ 2022, 3:05 IST
ಶವಗಳು ಪತ್ತೆಯಾಗಿರುವ ಪ್ರದೇಶ (ಎಎಫ್‌ಪಿ ಚಿತ್ರ)
ಶವಗಳು ಪತ್ತೆಯಾಗಿರುವ ಪ್ರದೇಶ (ಎಎಫ್‌ಪಿ ಚಿತ್ರ)   

ಸ್ಯಾನ್ ಆಂಟೋನಿಯೊ (ಟೆಕ್ಸಾಸ್‌):ಅಕ್ರಮವಾಗಿ ಯುಎಸ್‌ ಗಡಿ ಪ್ರವೇಶಿಸಿದ್ದಾರೆ ಎನ್ನಲಾದ40ಕ್ಕೂ ಹೆಚ್ಚು ವಲಸಿಗರ ಶವಗಳು ಸ್ಯಾನ್ ಆಂಟೋನಿಯೊ ನಗರದ ಹೊರವಲಯದಲ್ಲಿ ನಿಂತಿದ್ದ ಟ್ರಾಕ್ಟರ್-ಟ್ರೇಲರ್‌ ಹಾಗೂ ಅದರ ಸುತ್ತ ಸೋಮವಾರ ಪತ್ತೆಯಾಗಿವೆ.ಈ ಬಗ್ಗೆ 'ನ್ಯೂಯಾರ್ಕ್‌ ಟೈಮ್ಸ್‌' ಸೇರಿದಂತೆ ಹಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.

ಜೀವಂತವಾಗಿದ್ದ 12ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ ವರದಿಯಾದ ವಲಸಿಗರ ಅತ್ಯಂತ ಕೆಟ್ಟ ಸಾವಿನ ಪ್ರಕರಣಗಳಲ್ಲಿ ಇದೂ ಒಂದುಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಟ್ರ್ಯಾಕ್ಟರ್‌ ಪತ್ತೆಯಾಗುವುದಕ್ಕೂ ಕೆಲ ಹೊತ್ತಿನ ಮೊದಲು ಚಾಲಕ ಅದನ್ನುಅಲ್ಲಿ ಬಿಟ್ಟುಹೋಗಿರಬಹುದು ಎಂಬ ಶಂಕೆಯ ಮೇರೆಗೆ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ADVERTISEMENT

ಮೆಕ್ಸಿಕೊದಿಂದ ದಾಖಲೆ ಪ್ರಮಾಣದ ವಲಸಿಗರು ಅಕ್ರಮವಾಗಿ ಗಡಿ ದಾಟುತ್ತಿರುವುದರ ಮೇಲೆ ಟೆಕ್ಸಾಸ್‌ ಅಧಿಕಾರಿಗಳು ಸದ್ಯ ನಿಗಾವಹಿಸುತ್ತಿದ್ದಾರೆ. ಇದೀಗ ಬೆಳಕಿಗೆ ಬಂದಿರುವ ಪ್ರಕರಣ, ಬೇಸಿಗೆ ಮತ್ತು ವಸಂತಕಾಲದಲ್ಲಿ ಅಕ್ರಮ ವಲಸೆ ಪ್ರಕರಣಗಳ ಉಲ್ಬಣಕ್ಕೆ ಪುಷ್ಠಿನೀಡಿದೆ.

ಜನರು ಹೇಗೆ ಮೃತಪಟ್ಟಿದ್ದಾರೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಆದರೆ, ಜೂನ್‌ ತಿಂಗಳಲ್ಲಿ ಟೆಕ್ಸಾಸ್‌ನ ಸ್ಯಾನ್‌ ಅಂಟೋನಿಯೊ ಮತ್ತು ಇತರ ನಗರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣ ವಾತಾವರಣ ಇರುತ್ತದೆ. ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯ ಒಂದು ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಕಸ್ಟಮ್ಸ್‌ ಮತ್ತು ಗಡಿ ಭದ್ರತೆಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.