ಭಾರತ– ಪಾಕಿಸ್ತಾನ ಗಡಿ
ಪಿಟಿಐ ಚಿತ್ರ
ಇಸ್ಲಾಮಾಬಾದ್: ವಾಘಾ ಗಡಿಯನ್ನು ಬಂದ್ ಮಾಡಿದ್ದ ಪಾಕಿಸ್ತಾನ, ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನದ ಪ್ರಜೆಗಳ ಪ್ರವೇಶಕ್ಕೆ ಶುಕ್ರವಾರ ಅನುವುಮಾಡಿದೆ.
ಪಂಜಾಬ್‌ನ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ಬಳಿ ಅಟ್ಟಾರಿ – ವಾಘಾ ಗಡಿಯಿದೆ. ಭಾರತ ಬಿಟ್ಟು ತೆರಳಲು ಸರ್ಕಾರ ಏ.30ರವರೆಗೆ ಕಾಲಾವಕಾಶ ನೀಡಿತ್ತು. ಅವಧಿ ಮುಗಿದ ಕಾರಣ ಈ ಗಡಿಯನ್ನು ಗುರುವಾರ ಬಂದ್ ಮಾಡಲಾಗಿತ್ತು. ಇದರ ಪರಿಣಾಮ 70ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲೇ ಸಿಲುಕಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ, ‘ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನದ ನಾಗರಿಕರು ಸಿಲುಕಿರುವ ಬಗ್ಗೆ ಮಾಹಿತಿಯಿದೆ. ಭಾರತದ ಅಧಿಕಾರಿಗಳು ಅನುವು ಮಾಡಿಕೊಟ್ಟು, ಅವರ ಭಾಗದ ಗಡಿಯನ್ನು ತೆರೆದರೆ ನಮ್ಮ ಪ್ರಜೆಗಳನ್ನು ದೇಶಕ್ಕೆ ಸೇರಿಸಿಕೊಳ್ಳಲು ತಯಾರಿದ್ದೇವೆ’ ಎಂದು ಹೇಳಿದ್ದಾರೆ.
‘ಮುಂದಿನ ದಿನಗಳಲ್ಲೂ ಪಾಕಿಸ್ತಾನಿ ಪ್ರಜೆಗಳು ವಾಪಸ್ ಆಗಲು ವಾಘಾ ಗಡಿ ತೆರೆದಿರುತ್ತದೆ. ಭಾರತ ಸರ್ಕಾರ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡುವ ಮೂಲಕ ಗಂಭೀರ ಮಾನವೀಯ ಸವಾಲುಗಳನ್ನು ಎದುರಿಸುವಂತೆ ಮಾಡಿದೆ. ಅನೇಕರಿಗೆ ವೈದ್ಯಕೀಯ ಚಿಕಿತ್ಸೆಗೆ ತೊಂದರೆಯಾಗಿದೆ, ಇನ್ನೂ ಕೆಲವರು ಕುಟುಂಬದವರಿಂದ ದೂರವಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.