
ಬೋಂಡಿ ಬೀಚ್ ಹತ್ಯಾಕಾಂಡ
ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯ ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಬಂದೂಕುಧಾರಿಗಳಿಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿವೆ.
ಅದರಲ್ಲೂ ಗುಂಡಿನ ದಾಳಿ ನಡೆಸುತ್ತಿದ್ದ ಭಯೋತ್ಪಾದಕನನ್ನು ವಯಸ್ಕ ವ್ಯಕ್ತಿಯೊಬ್ಬರು ಹಿಡಿದು ಬೀಳಿಸಿ, ಆತನನ್ನು ನೆಲಕ್ಕೆ ಕೆಡವಿರುವುದು ನೋಡುಗರ ಎದೆ ಝಲ್ಲೆನಿಸುವಂತೆ ಮಾಡುತ್ತದೆ.
ಗನ್ ಹಿಡಿದವನ್ನು ಯಾವುದೇ ಅಂಜಿಕೆಯಿಲ್ಲದೇ ಹಿಡಿದು ಬೀಳಿಸಿರುವ ಆ ವ್ಯಕ್ತಿ ಇನ್ನೊಬ್ಬ ಭಯೋತ್ಪಾದಕನ ಗುಂಡಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಾಹಸವನ್ನು ಕಂಡು ಜಗತ್ತಿನ ಅನೇಕ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿ, ಮೆಚ್ಚುಗೆ ಸೂಚಿಸಿದ್ದಾರೆ. ಸಾಹಸ ಮೆರೆದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ಆಸ್ಟ್ರೇಲಿಯಾ ಸರ್ಕಾರ ಭಯೋತ್ಪಾದನಾ ಕೃತ್ಯ ಎಂದು ಘೋಷಣೆ ಮಾಡಿದ್ದು, ದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಪೊಲೀಸರು ನಡೆಸಿದ ಪ್ರತಿ ದಾಳಿ ಯಲ್ಲಿ ಒಬ್ಬ ದಾಳಿಕೋರ ಮೃತಪಟ್ಟಿ ದ್ದಾನೆ. ಇನ್ನೊಬ್ಬನನ್ನು ಬಂಧಿಸಲಾಗಿದೆ. ಘಟನೆಯಲ್ಲಿ 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಡೆದಿದ್ದೇನು?
ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ದಾಳಿಕೋರನಿಗೆ ಸೇರಿದ ವಾಹನದಿಂದ ಕಚ್ಚಾ ಬಾಂಬ್ ಅನ್ನು ವಶಕ್ಕೆ ಪಡೆಯಲಾಗಿದೆ. ಗಾಯ ಗೊಂಡವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಸ್ಟೇಟ್ ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಗುಂಡಿನ ದಾಳಿಗೆ ಕಾರಣ ಏನು ಎನ್ನುವುದನ್ನು ಇನ್ನೂ ಆಸ್ಟ್ರೇಲಿಯಾದ ಸರ್ಕಾರ ಖಚಿತಪಡಿಸಿಲ್ಲ. ಯೆಹೂದಿಗಳ ಎಂಟು ದಿನಗಳ ಚಳಿಗಾಲದ ‘ದೀಪಗಳ ಹಬ್ಬ’ದ ಮೊದಲ ದಿನವಾದ ಭಾನುವಾರ ಸಾವಿರಕ್ಕೂ ಹೆಚ್ಚು ಜನರು ಬೋಂಡಿ ಕಡಲ ತೀರದಲ್ಲಿ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಂತೋಷದ ದಿನದಂದೇ ದುಷ್ಕೃತ್ಯ’: ‘ಹನುಕ್ಕಾ’ ಯಹೂದಿಗಳಿಗೆ ಪವಿತ್ರ ಹಬ್ಬ. ಇದು ನಂಬಿಕೆಯ ಆಚರಣೆ. ಆದರೆ, ಈ ಸಂತೋಷದ ದಿನದಂದೇ ದುಷ್ಕೃತ್ಯ ನಡೆದಿದೆ. ಇದು ಯಹೂದಿ ಆಸ್ಟ್ರೇಲಿಯನ್ನರನ್ನು ಗುರಿಯಾಗಿಸಿ ಕೊಂಡು ನಡೆದ ದಾಳಿಯಾಗಿದೆ. ಭಯೋತ್ಪಾದನೆ ಆಸ್ಟ್ರೇಲಿಯಾದ ಹೃದಯವನ್ನು ಗಾಸಿಗೊಳಿಸಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.