ADVERTISEMENT

ಅತ್ಯಾಚಾರಕ್ಕೊಳಗಾಗಿದ್ದೆ ಎಂದಿದ್ದ ಮಹಿಳೆಯ ಕ್ಷಮೆ ಕೋರಿದ ಆಸ್ಟ್ರೇಲಿಯಾ ಪ್ರಧಾನಿ

ರಾಯಿಟರ್ಸ್
Published 16 ಫೆಬ್ರುವರಿ 2021, 8:17 IST
Last Updated 16 ಫೆಬ್ರುವರಿ 2021, 8:17 IST
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್   

ಕ್ಯಾನ್‌ಬೆರಾ: ಹೆಸರೇಳಲಾಗದ ಸಹೋದ್ಯೋಗಿಯೊಬ್ಬರಿಂದ ದೇಶದ ಸಂಸತ್ತಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿರುವುದಾಗಿ ಆರೋಪಿಸಿರುವ ಮಹಿಳೆಯೊಬ್ಬರಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮಂಗಳವಾರ ಕ್ಷಮೆಯಾಚಿಸಿದ್ದು, ಸರ್ಕಾರದ ಕೆಲಸದ ಸ್ಥಳ ಸಂಸ್ಕೃತಿಯ ಬಗ್ಗೆ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಅವರ ಕಚೇರಿಯಲ್ಲಿ 2019ರ ಮಾರ್ಚ್‌ನಲ್ಲಿ ಮೋರಿಸನ್‌ರ ಆಡಳಿತಾರೂಢ ಲಿಬರಲ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಮಹಿಳೆ ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿ, ಆ ವರ್ಷದ ಏಪ್ರಿಲ್ ಆರಂಭದಲ್ಲಿ ತಾನು ಪೊಲೀಸರೊಂದಿಗೆ ಮಾತನಾಡಿದ್ದೆ, ಆದರೆ ತನ್ನ ವೃತ್ತಿಜೀವನದ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿ ಔಪಚಾರಿಕ ದೂರು ನೀಡುವುದರಿಂದ ಹಿಂದೆ ಸರಿದಿದ್ದೆ ಎಂದಿದ್ದಾರೆ. ರಾಜಧಾನಿಯಲ್ಲಿನ ಪೊಲೀಸರು, ಏಪ್ರಿಲ್ 2019 ರಲ್ಲಿ ದೂರುದಾರರೊಂದಿಗೆ ಮಾತನಾಡಿದ್ದನ್ನು ದೃಢಪಡಿಸಿದ್ದು, ಅವರು ಔಪಚಾರಿಕ ದೂರು ನೀಡದಿರಲು ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ನನ್ನ ಮೇಲಿನ ದಾಳಿಯ ಬಗ್ಗೆ ರೆನಾಲ್ಡ್ಸ್ ಕಚೇರಿಯ ಹಿರಿಯ ಸಿಬ್ಬಂದಿಗೆ ತಿಳಿಸಿದ್ದೇನೆ. ನಂತರ ತನ್ನ ಮೇಲೆ ಹಲ್ಲೆ ನಡೆಸಿದ್ದ ಕಚೇರಿಯಲ್ಲಿಯೇ ನಡೆಯುವ ಸಭೆಯಲ್ಲಿ ಭಾಗವಹಿಸಲು ಕೇಳಿಕೊಂಡರು ಎಂದು ಅವರು ಹೇಳಿದರು.
ಕಳೆದ ವರ್ಷ ದೂರಿನ ಬಗ್ಗೆ ತಿಳಿಸಿದ್ದಾಗಿ ಲಿಂಡಾ ರೆನಾಲ್ಡ್ಸ್ ಸೋಮವಾರ ದೃಢಪಡಿಸಿದ್ದಾರೆ, ಆದರೆ ಪೊಲೀಸರಿಗೆ ದೂರು ನೀಡುವಂತೆ ಮಹಿಳೆಗೆ ಒತ್ತಡ ಹೇರಲಾಗಿದೆ ಎಂಬುದನ್ನು ಅವರು ನಿರಾಕರಿಸಿದ್ದಾರೆ.

ಇದೇ ವಿಚಾರವಾಗಿ ಪ್ರಧಾನಿ ಸ್ಕಾಟ್ ಮಾರಿಸನ್ ಮಂಗಳವಾರ ಮಹಿಳೆಗೆ ಕ್ಷಮೆಯಾಚಿಸಿದ್ದಾರೆ ಮತ್ತು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

'ಆ ರೀತಿಯ ಘಟನೆ ಸಂಭವಿಸಬಾರದಿತ್ತು, ಮತ್ತು ನಾನು ಕ್ಷಮೆಯಾಚಿಸುತ್ತೇನೆ. ಈ ಸ್ಥಳದಲ್ಲಿ ಕೆಲಸ ಮಾಡುವ ಯಾವುದೇ ಯುವತಿ ಸಾಧ್ಯವಾದಷ್ಟು ಸುರಕ್ಷಿತವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ.' ಎಂದು ಮಾರಿಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.