ADVERTISEMENT

ಬಾಂಗ್ಲಾದೇಶ | ರವೀಂದ್ರನಾಥ ಟ್ಯಾಗೋರ್ ಪೂರ್ವಜರ ಮನೆ ಮೇಲೆ ದಾಳಿ: ಬಿಜೆಪಿ ಖಂಡನೆ

ಪಿಟಿಐ
Published 12 ಜೂನ್ 2025, 9:32 IST
Last Updated 12 ಜೂನ್ 2025, 9:32 IST
ರವೀಂದ್ರನಾಥ ಟ್ಯಾಗೋರ್
ರವೀಂದ್ರನಾಥ ಟ್ಯಾಗೋರ್   

ಢಾಕಾ: ನೊಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್‌ ಅವರ ಪೂರ್ವಜರ ಮನೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ. ಬಾಂಗ್ಲಾದೇಶದ ಸಿರಾಜಗಂಜ್‌ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನಿಖೆಗೆ ಮೂವರು ಅಧಿಕಾರಿಗಳ ತಂಡ ರಚನೆಯಾಗಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಜೂನ್‌ 8 ರಂದು ಟ್ಯಾಗೋರ್ ಅವರ ವಸ್ತು ಪ್ರದರ್ಶನಾಲಯ ಭೇಟಿ ಬಂದಿದ್ದ ವ್ಯಕ್ತಿ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆಸಿದ್ದ ಎನ್ನಲಾಗಿದ್ದು ಇದೇ ವಿಚಾರ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಜೂನ್‌ 11 ರಂದು ಟ್ಯಾಗೋರ್‌ ಪೂರ್ವಜರ ಸ್ಮಾರಕದ ಬಂಗಲೆಯ ಮೇಲೆ ದಾಳಿ ನಡೆದಿದ್ದು ಕಿಟಕಿ ಗಾಜು, ಬಾಗಿಲು, ಪೀಠೋಪಕರಣಗಳು ಹಾನಿಗೊಳಗಾಗಿವೆ.  ಗಲಾಟೆ, ದಾಳಿ ನಡೆದ ಬಳಿಕ ಟ್ಯಾಗೋರ್‌ ಅವರ ಬಂಗಲೆಯನ್ನು ಮುಚ್ಚಲಾಗಿದೆ. ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ.

ADVERTISEMENT

ಭಾರತದಲ್ಲಿ ಬಿಜೆಪಿ ಖಂಡನೆ

ಭಾರತೀಯರ ಪರಂಪರೆಯಾಗಿರುವ ರವೀಂದ್ರನಾಥ ಟ್ಯಾಗೋರ್‌ ಅವರ ಮನೆ ಮೇಲೆ ದಾಳಿ ನಡೆದಿರುವುದನ್ನು ಖಂಡಿಸಿರುವ ಬಿಜೆಪಿ, ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ದಾಳಿಯ ಹಿಂದೆ ಜಮಾತ್‌– ಎ– ಇಸ್ಲಾಮಿ ಮತ್ತು ಹೆಫಜತ್-ಎ-ಇಸ್ಲಾಂ ಸಂಘಟನೆಗಳು ಕೈವಾಡವಿದೆ. ಟ್ಯಾಗೋರ್ ಪಶ್ಚಿಮ ಬಂಗಾಳ, ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದ್ದಾರೆ ಇದೇ ಕಾರಣಕ್ಕೆ ಅವರ ಪೂರ್ಜಜನರ ಮನೆ ಮೇಲೆ ದಾಳಿ ನಡೆಸಲಾಗಿದೆ’ ಎಂದು ದೂರಿದ್ದಾರೆ.

ಪಶ್ಚಿಮ ಬಂಗಾಳದ ಹೊಸತನಕ್ಕೆ ರುವಾರಿಯಾದ ಟ್ಯಾಗೋರ್‌ ಮನೆ ಮೇಲೆ ದಾಳಿ ನಡೆದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ನೆರೆಯ ಬಾಂಗ್ಲಾದೇಶದ ನುಸುಳುಕೋರರನ್ನು ಅವರು ಮತಬ್ಯಾಂಕ್ ಆಗಿ ನೋಡುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಮೌನವಾಗಿರಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.