ಬಾಂಗ್ಲಾದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಖೈರುಲ್ ಹಕಿ
ಎಕ್ಸ್ ಚಿತ್ರ
ಢಾಕಾ: ದೇಶದ್ರೋಹ ಸೇರಿದಂತೆ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಎಬಿಎಂ ಖೈರುಲ್ ಹಕಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2010 ರಿಂದ 2011ರವರೆಗೆ ಬಾಂಗ್ಲಾ ದೇಶದ 19ನೇ ಮುಖ್ಯ ನ್ಯಾಯಮೂರ್ತಿಯಾಗಿ ಹಕಿ ಕಾರ್ಯನಿರ್ವಹಿಸಿದ್ದರು.
ಢಾಕಾದ ಧನಮೊಂಡಿ ಪ್ರದೇಶದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2011 ರಲ್ಲಿ ‘ಹಂಗಾಮಿ ಸರ್ಕಾರ ವ್ಯವಸ್ಥೆ/ ಮಧ್ಯಂತರ ಸರ್ಕಾರದ ವ್ಯವಸ್ಥೆ ಅಸಂವಿಧಾನಿಕ’ ಎಂಬ ತೀರ್ಪು ಸೇರಿದಂತೆ ಮಹತ್ವದ ತೀರ್ಪುಗಳನ್ನು ಹಕಿ ಅವರು ನೀಡಿದ್ದರು.
ಹಕಿ ಅವರು ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಅವರ ಬಂಧನ ಕನಿಷ್ಠ ಒಂದು ಪ್ರಕರಣದಲ್ಲಾದರೂ ಆಗಿದೆ ಎಂಬುದನ್ನು ತೋರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024ರ ಆಗಸ್ಟ್‌ನಲ್ಲಿ ಹಕಿ ವಿರುದ್ಧ ವಿವಿಧ ವಕೀಲರು ದೂರು ದಾಖಲಿಸಿದ್ದರು. ಆಗಸ್ಟ್ 5ರಂದು ಪ್ರಧಾನ ಮಂತ್ರಿ ಅವಾಮಿ ಲೀಗ್ ಪಕ್ಷದ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡಿತು. ಆ ಸಮಯದಲ್ಲಿ ಹಕಿ ಅವರು ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು. ಆ.13ರಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಢಾಕಾದಲ್ಲಿ ಮೊದಲು ವಂಚನೆ ಮತ್ತು ಸರ್ಕಾರಿ ವ್ಯವಸ್ಥೆಗೆ ಸಂಬಂಧಿಸಿದ 13 ನೇ ಸಾಂವಿಧಾನಿಕ ತಿದ್ದುಪಡಿಯನ್ನು ರದ್ದುಗೊಳಿಸುವ ತೀರ್ಪನ್ನು ಬದಲಾಯಿಸುವಲ್ಲಿ ನಕಲಿ ಸಹಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಾರದ ಬಳಿಕ ಅದೇ ವಿಚಾರಕ್ಕೆ ಢಾಕಾದ ಹೊರವಲಯದಲ್ಲಿ ರಿವರ್ ಪೋರ್ಟ್ ಟೌನ್‌ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.