ADVERTISEMENT

ದೇಶದ್ರೋಹ ಆರೋಪ: ಚಿನ್ಮಯಿ ಕೃಷ್ಣದಾಸ್‌ ಜಾಮೀನು ಅರ್ಜಿಯ ವಿಚಾರಣೆ ಡಿ.3ಕ್ಕೆ

ಪಿಟಿಐ
Published 1 ಡಿಸೆಂಬರ್ 2024, 11:28 IST
Last Updated 1 ಡಿಸೆಂಬರ್ 2024, 11:28 IST
<div class="paragraphs"><p>ಚಿನ್ಮಯಿ ಕೃಷ್ಣ ದಾಸ್‌</p></div>

ಚಿನ್ಮಯಿ ಕೃಷ್ಣ ದಾಸ್‌

   

ಢಾಕಾ: ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಗ್ಲಾದೇಶದ ನ್ಯಾಯಾಲಯ ಮಂಗಳವಾರ (ಡಿಸೆಂಬರ್ 3) ನಡೆಸಲಿದೆ.

ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ ಅವರು ಮಂಗಳವಾರದ ವಿಚಾರಣೆ ನಡೆಸಲಿದ್ದಾರೆ ಎಂದು ಬಾಂಗ್ಲಾದೇಶದ ಸುದ್ದಿಮಾಧ್ಯಮ ‘ಬಿಡಿನ್ಯೂಸ್‌24 ಡಾಟ್‌ ಕಾಮ್‌’ ವರದಿ ಮಾಡಿದೆ.

ADVERTISEMENT

ವಿಚಾರಣೆಯ ದಿನಾಂಕವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದರೆ ಬುಧವಾರ ಮತ್ತು ಗುರುವಾರ ವಕೀಲರು ಕಲಾಪ ಬಹಿಷ್ಕರಿಸಿ, ಕೆಲಸಕ್ಕೆ ಗೈರಾದ ಕಾರಣ ಈ ಪ್ರಕಟಣೆ ಹೊರಡಿಸುವುದು ವಿಳಂಬವಾಗಿದೆ ಎಂದು ಚಟ್ಟೋಗ್ರಾಮ ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶ ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ‘ ವಕ್ತಾರರಾದ ಕೃಷ್ಣದಾಸ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಕಳೆದ ಸೋಮವಾರ ಬಂಧಿಸಲಾಗಿದೆ. ಚಟ್ಟೋಗ್ರಾಮ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿ ಕಳೆದ ಮಂಗಳವಾರ ಜೈಲಿಗೆ ಕಳುಹಿಸಿದೆ.

ದಾಸ್‌ ಅವರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ದೇಶದ ಹಲವೆಡೆ ಹಿಂದೂ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.

ಅಕ್ಟೋಬರ್ 30 ರಂದು, ಹಿಂದೂ ಸಮುದಾಯದ ಸಮಾವೇಶದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಲ್ಲಿ ದಾಸ್ ಸೇರಿದಂತೆ 19 ಜನರ ವಿರುದ್ಧ ಚಟ್ಟೋಗ್ರಾಮದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೇ ದಾಸ್‌ ಸೇರಿದಂತೆ ಇಸ್ಕಾನ್ ಸಂಘಟನೆಗೆ ಸೇರಿದ 17 ಜನರ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ಅಧಿಕಾರಿಗಳು ಗುರುವಾರ ಆದೇಶಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.