ADVERTISEMENT

ಬಾಂಗ್ಲಾದೇಶ | ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಸಾವು: ತಿಂಗಳೊಳಗೆ 5ನೇ ಘಟನೆ

ಪಿಟಿಐ
Published 3 ಜನವರಿ 2026, 12:41 IST
Last Updated 3 ಜನವರಿ 2026, 12:41 IST
   

ಢಾಕಾ/ನವದೆಹಲಿ : ಬಾಂಗ್ಲಾದೇಶದಲ್ಲಿ ಮೂರು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಹಿಂದೂ ವ್ಯಾಪಾರಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

‘ಔಷಧಿ ಅಂಗಡಿ ನಡೆಸುತ್ತಿದ್ದ ಖೋಕನ್‌ ಚಂದ್ರದಾಸ್‌ (50) ಅವರ ಮೇಲೆ ತೀವ್ರ ಹಲ್ಲೆ ನಡೆಸಿ ಬೆಂಕಿ ಹಚ್ಚಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಅವರು ಮೃತಪಟ್ಟರು’ ಎಂದು ಬಾಂಗ್ಲಾದೇಶ ಹಿಂದೂ ಬುದ್ಧಿಸ್ಟ್‌ ಕ್ರಿಶ್ಚಿಯನ್‌ ಐಕ್ಯತಾ ಕೌನ್ಸಿಲ್‌ ಹೇಳಿದೆ.

‘ಕಳೆದ ಒಂದು ತಿಂಗಳಲ್ಲಿ ಹಿಂದೂಗಳ ಮೇಲಿನ ದಾಳಿಯ ಒಟ್ಟು ಏಳು ಘಟನೆಗಳು ನಡೆದಿದ್ದು, ಐವರು ಮೃತಪಟ್ಟಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಬೆದರಿಸಲು ದುಷ್ಕರ್ಮಿಗಳು ಹಲ್ಲೆ ನಡೆಸುತ್ತಿದ್ದಾರೆ’ ಎಂದು ಕೌನ್ಸಿಲ್‌ನ ವಕ್ತಾರ ಕಾಜೊಲ್ ದೇವನಾಥ್‌ ಹೇಳಿದರು.

ADVERTISEMENT

ಏನಾಗಿತ್ತು?: ಬುಧವಾರ ಸಂಜೆ ಅಂಗಡಿ ಮುಚ್ಚಿದ ಬಳಿಕ ಮನೆಗೆ ಮರಳುತ್ತಿದ್ದ ದಾಸ್‌ ಅವರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿತ್ತು. ಅವರು ಪ್ರಯಾಣಿಸುತ್ತಿದ್ದ ಆಟೊವನ್ನು ತಡೆದು, ಮಾರಕಾಸ್ತ್ರಗಳಿಂದ ಮನಬಂದಂತೆ ದಾಳಿ ನಡೆಸಲಾಗಿತ್ತು.

ಬಳಿಕ, ಅವರ ತಲೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ದಾಸ್‌ ಅವರು ತಕ್ಷಣವೇ ಹತ್ತಿರದಲ್ಲಿ ಇದ್ದ ಕೊಳಕ್ಕೆ ಧುಮುಕಿ‌ದ್ದರು. ಸ್ಥಳೀಯರು ನೆರವಿಗೆ ಧಾವಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಢಾಕಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೂ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಿಗ್ಗೆ ಮೃತಪಟ್ಟರು.

‘ಭಯದ ವಾತಾವರಣ ಸೃಷ್ಟಿಸಲು ಅಲ್ಪಸಂಖ್ಯಾತ ಸಮುದಾಯದ ಜನರು ಮತ್ತು ಮನೆಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗುತ್ತಿದೆ’ ಎಂದು ದೇವನಾಥ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.