
ಬಾಂಗ್ಲಾ ಧ್ವಜ
ಢಾಕಾ: ಬಾಂಗ್ಲಾದೇಶದಲ್ಲಿ 2025ರಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡಂತಹ ಬಹುತೇಕ ಅಪರಾಧ ಪ್ರಕರಣಗಳು ಕ್ರಿಮಿನಲ್ ಸ್ವರೂಪದ್ದಾಗಿವೆಯೇ ಹೊರತು ಕೋಮು ಉದ್ದೇಶದಿಂದ ನಡೆದಂತಹ ಪ್ರಕರಣಗಳಲ್ಲ ಎಂದು ಇಲ್ಲಿನ ಮಧ್ಯಂತರ ಸರ್ಕಾರವು ಸೋಮವಾರ ತಿಳಿಸಿದೆ.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಗಳನ್ನು ತಡೆಗಟ್ಟುವಂತೆ ಬಾಂಗ್ಲಾದೇಶದ ಸರ್ಕಾರಕ್ಕೆ ಭಾರತವು ಜನವರಿ 9ರಂದು ತೀವ್ರ ಒತ್ತಡ ಹೇರಿತ್ತು.
ಇದಾಗುತ್ತಿದ್ದಂತೆಯೇ ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರ ಮಾಧ್ಯಮ ವಿಭಾಗವು ಅಲ್ಪಸಂಖ್ಯಾತ ಸಮುದಾಯದವರ ಪ್ರಕರಣಗಳಿಗೆ ಸಂಬಂಧಿಸಿದ ಪೊಲೀಸ್ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ನೀಡಿದೆ.
‘645 ಪ್ರಕರಣಗಳು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ್ದಾಗಿದ್ದು, ಪ್ರತಿಯೊಂದು ಘಟನೆಯೂ ಕಳವಳಕಾರಿ ಆಗಿದೆ. ಈ ಪೈಕಿ 71 ಪ್ರಕರಣಗಳು ಕೋಮು ಉದ್ದೇಶಕ್ಕಾಗಿ ನಡೆದಿರುವುದು ಎಂದು ಗುರುತಿಸಲಾಗಿದೆ’ ಎಂದು ತಿಳಿಸಿದೆ.
ಜತೆಗೆ ಕೋಮುದ್ವೇಷದ ಪ್ರಕರಣಗಳ ಪೈಕಿ 38 ಪ್ರಕರಣಗಳು ದೇಗುಲ ಧ್ವಂಸ, ಎಂಟು ಪ್ರಕರಣಗಳು ಹಿಂಸಾಚಾರ–ಗಲಭೆ, ಒಂದು ಕಳ್ಳತನ, ಒಂದು ಹತ್ಯೆ ಹಾಗೂ 23 ಪ್ರಕರಣಗಳು ಬೆದರಿಕೆ, ಪ್ರಚೋದನೆಗೆ ಸಂಬಂಧಿಸಿದವು ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಉಳಿದ 574 ಪ್ರಕರಣಗಳು ಕ್ರಿಮಿನಲ್ ಸ್ವರೂಪದ್ದಾಗಿವೆ. 51 ಪ್ರಕರಣ ನೆರಹೊರೆಯ ಜಗಳ, 23 ಭೂ ವಿವಾದ, 106 ಕಳ್ಳತನ, 26 ವೈಯಕ್ತಿಕ ದ್ವೇಷ, 58 ಅತ್ಯಾಚಾರ ಹಾಗೂ 172 ಪ್ರಕರಣಗಳು ಅಸಹಜ ಸಾವಿಗೆ ಸಂಬಂಧಿಸಿದ್ದು ಎಂದೂ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.