
ಢಾಕಾ: ‘ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್ ಮತ್ತು ಶೇಖ್ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿ ಕೊಳ್ಳ ಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧ
ವನ್ನು ಆರಂಭಿಸಲು ನಾವು ತಯಾರಿ ದ್ದೇವೆ’ ಎಂದು ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರ ಸಲಹೆ ಗಾರ ಹುಮಾಯೂನ್ ಕಬೀರ್ ಹೇಳಿದರು.
‘ಪಿಟಿಐ’ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬಿಎನ್‌ಪಿಗೆ ಸಿಕ್ಕ ಅಭೂತಪೂರ್ವ ಗೆಲುವನ್ನು ಭಾರತ ಮನಗಾಣಬೇಕು. ದೇಶದ ಬದಲಾವಣೆಯನ್ನು ಸ್ವೀಕರಿಸಿ ಅದನ್ನು ಒಪ್ಪಿಕೊಳ್ಳುವುದು ಭಾರತದ ಹೊಣೆಗಾರಿಕೆ’ ಎಂದರು.
ಹಸೀನಾ ಅವರನ್ನು ಬಾಂಗ್ಲಾಕ್ಕೆ ವಾಪಸು ಕಳುಹಿಸಿಕೊಡುವ ವಿಚಾರದ ಕುರಿತು ಪ್ರಕ್ರಿಯಿಸಿ, ‘ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂಥ ಚಟುವಟಿಕೆಗಳಿಗೆ ಭಾರತವು ತನ್ನ ನೆಲದಲ್ಲಿ ಅವಕಾಶ ನೀಡಬಾರದು. ಇದು ಸಾಧ್ಯವಾಗದ ಹೊರತು, ಭಾರತ
ದೊಂದಿಗೆ ಸಹಜವಾದ ರಾಜತಾಂತ್ರಿಕ ಸಹಕಾರ ಅಸಾಧ್ಯ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿ, ‘ತಾರಿಕ್ ಅವರು ಮೊದಲು ದೇಶದ ಸಮೃದ್ಧಿ, ಆರ್ಥಿಕ ಭದ್ರತೆಗೆ ಕಡೆಗೆ ಒತ್ತು ನೀಡಲಿದ್ದಾರೆ. ಈ ಎಲ್ಲವೂ ಒಂದು ಹಂತಕ್ಕೆ ಬಂದ ನಂತರವೇ ಅವರು ವಿದೇಶ ಭೇಟಿ ಆರಂಭಿಸಲಿದ್ದಾರೆ’ ಎಂದರು.
ನಾಳೆ ಪ್ರಮಾಣ ವಚನ: ಓಂ ಬಿರ್ಲಾ ಭಾಗಿ
ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರು ಫೆ.17ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಸಮಾರಂಭವು ಸಂಪ್ರದಾಯದಂತೆ ಅಧ್ಯಕ್ಷರ ಭವನದಲ್ಲಿ ನಡೆಯದೆ, ಸಂಸತ್ ಭವನದ ಆವರಣದಲ್ಲಿ ನಡೆಯಲಿದೆ.
ಇದರ ಜೊತೆಯಲ್ಲಿ ತಾರಿಕ್ ಅವರ ನೂತನ ಸಂಪುಟದ ಸದಸ್ಯರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಧ್ಯಕ್ಷರೇ ಇವರಿಗೂ ಪ್ರಮಾಣ ವಚನ ಬೋಧಿಸಲಿದ್ದಾರೆ.
‘ಸಂಪ್ರದಾಯದಂತೆ ಹಿಂದಿನ ಸರ್ಕಾರದ
ಅವಧಿಯಲ್ಲಿದ್ದ ಸ್ಪೀಕರ್ ಅಥವಾ ಉಪ ಸ್ಪೀಕರ್ ಸಂಸದರಿಗೆ ಪ್ರಮಾಣ ವಚನ ಬೋಧಿಸಬೇಕು. ಆದರೆ, ಸ್ಪೀಕರ್ ಅವರು ರಾಜೀನಾಮೆ ನೀಡಿದ್ದರಿಂದ ಮುಖ್ಯ ಚುನಾವಣಾ ಆಯುಕ್ತರು ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಓಂ ಬಿರ್ಲಾ ಭಾಗಿ: ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಢಾಕಾಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ಪ್ರಧಾನಿ ಮೋದಿ ಅವರಿಗೆ ಸಮಾರಂಭ ಆಮಂತ್ರಣ ನೀಡಲಾಗಿತ್ತು. ಆದರೆ, ಅವರು ಭಾಗವಹಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.