ADVERTISEMENT

ಪ್ರಣವ್ ಮುಖರ್ಜಿ ಅಗಲಿಕೆ: ಬಾಂಗ್ಲಾದೇಶದಲ್ಲಿ ಶೋಕಾಚರಣೆ

ವಿಮೋಚನೆಗೆ ನೆರವಾದ ‘ನಿಜವಾದ ಸ್ನೇಹಿತ’ನಿಗೆ ಅಂತಿಮ ನಮನ

ಪಿಟಿಐ
Published 2 ಸೆಪ್ಟೆಂಬರ್ 2020, 13:06 IST
Last Updated 2 ಸೆಪ್ಟೆಂಬರ್ 2020, 13:06 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ಢಾಕಾ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಬುಧವಾರ ಶೋಕಾಚರಣೆ ನಡೆಸಿತು.

ದೇಶದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ವಿದೇಶಗಳಲ್ಲಿರುವ ಬಾಂಗ್ಲಾ ದೇಶದ ಕಚೇರಿಗಳು ತಮ್ಮ ಕಟ್ಟಡಗಳ ಮೇಲೆ ಬಾಂಗ್ಲಾದ ರಾಷ್ಟ್ರಧ್ವಜವನ್ನು ಅರ್ಧಕ್ಕೆಹಾರಿಸುವ ಮೂಲಕ ಪ್ರಣವ್‌ಗೆ ನಮನ ಸಲ್ಲಿಸಿದವು.

ಬಾಂಗ್ಲಾದ ಪಾಲಿಗೆ ಪ್ರಣವ್ ‘ನಿಜವಾದ ಸ್ನೇಹಿತ’. ಅವರನ್ನು ಬಾಂಗ್ಲಾದ ಜನರು ಹೆಚ್ಚು ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. 1971ರ ಬಾಂಗ್ಲಾ ದೇಶ ವಿಮೋಚನೆ ಹಾಗೂ ಭಾರತ–ಬಾಂಗ್ಲಾ ದ್ವಿಪಕ್ಷೀಯ ಮಾತುಕತೆಯನ್ನು ಪ್ರಣವ್ ಬಲಗೊಳಿಸಿದ್ದರು. ಅವರನ್ನು ಬಾಂಗ್ಲಾ ಎಂದಿಗೂ ಮರೆಯುವುದಿಲ್ಲ’ಎಂದು ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಸ್ಮರಿಸಿಕೊಂಡಿದ್ದಾರೆ.

ADVERTISEMENT

ಮುಖರ್ಜಿ ಅವರ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವವ ಹಸೀನಾ, ‘ಭಾರತ ರತ್ನ’ ಮುಖರ್ಜಿ ಅವರ ದಣಿವರಿಯದ ಕೆಲಸವು ಭಾರತ ಮಾತ್ರವಲ್ಲದೇ, ಇತರ ದೇಶಗಳ ಭವಿಷ್ಯದ ಪೀಳಿಗೆಯ ನಾಯಕರನ್ನೂ ಪ್ರೇರೇಪಿಸುತ್ತದೆ’ ಎಂದು ಹೇಳಿದ್ದಾರೆ.

ಬಾಂಗ್ಲಾ ವಿಮೋಚನೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ 2013ರಲ್ಲಿ ಬಾಂಗ್ಲಾ ದೇಶವು ಪ್ರಣವ್ ಮುಖರ್ಜಿ ಅವರಿಗೆ ‘ಬಾಂಗ್ಲಾ ದೇಶ ಮುಕ್ತಿಜುದ್ದೋ ಸೊಮ್ಮಾನೊನಾ’ ಎನ್ನುವ ಗೌರವ ನೀಡಿ ಪುರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.