ADVERTISEMENT

ಬಾಂಗ್ಲಾದಲ್ಲಿ ಮತ್ತೆ ಪ್ರತಿಭಟನೆ: ಲಾಠಿಚಾರ್ಜ್‌

ಪಿಟಿಐ
Published 17 ಅಕ್ಟೋಬರ್ 2025, 14:30 IST
Last Updated 17 ಅಕ್ಟೋಬರ್ 2025, 14:30 IST
   

ಢಾಕಾ: ಜುಲೈ ಚಾರ್ಟರ್‌ (ಸನ್ನದು) ಜಂಟಿ ಘೋಷಣೆಗೆ ಸಹಿ ಹಾಕುವ ಅನಿಶ್ಚಿತತೆಯ ಮಧ್ಯೆ ಸಂಸತ್ತಿನ ಬಳಿ ಜಮಾಯಿಸಿದ ಪ್ರತಿಭಟನಕಾರರನ್ನು ಚದುರಿಸಲು ಬಾಂಗ್ಲಾ ಪೊಲೀಸರು ಲಾಠಿ ಬೀಸಿ, ಅಶ್ರುವಾಯು ಸಿಡಿಸಿದರು.

ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಆಡಳಿತದ ವಿರುದ್ಧ 2024ರ ಆಗಸ್ಟ್‌ನಲ್ಲಿ ನಡೆದ ದಂಗೆಯಲ್ಲಿ ಗಾಯಗೊಂಡವರಿಗೆ ಹಾಗೂ ಭಾಗಿಯಾಗಿದ್ದವರಿಗೆ ಕಾನೂನಿನ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂಬ ಬೇಡಿಕೆಯ ಜುಲೈ ಚಾರ್ಟರ್‌ಗೆ ಸಹಿ ಹಾಕುವ ವೇದಿಕೆ ಮುಂಭಾಗ ಶುಕ್ರವಾರ ನೂರಾರು ಪ್ರತಿಭಟನಕಾರರು ಜಮಾಯಿಸಿದ್ದರು‌ ಎಂದು ಬಿಡಿನ್ಯೂಸ್‌24.ಕಾಮ್‌ ವರದಿ ಮಾಡಿದೆ.

ಪ್ರತಿಭಟನಕಾರರು ವೇದಿಕೆ ಮುಂಭಾಗ ಜಮಾಯಿಸುವುದಕ್ಕೂ ಮೊದಲು, ಮುಖ್ಯ ದ್ವಾರಗಳನ್ನು ಹತ್ತುವ ಮೂಲಕ ಸಂಸತ್ತಿನ ಆವರಣ ಪ್ರವೇಶಿಸಿದ್ದರು ಎಂದು ವರದಿಯಾಗಿದೆ.

ADVERTISEMENT

ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನಕಾರರು ಅತಿಥಿಗಳಿಗಾಗಿ ಕಾಯ್ದಿರಿಸಿದ ಕುರ್ಚಿಗಳ ಮೇಲೆ ಕುಳಿತು ಘೋಷಣೆಗಳನ್ನು ಕೂಗಿದರು ಎಂದು ಪೋರ್ಟಲ್ ತಿಳಿಸಿದೆ.

ಉದ್ರಿಕ್ತಗೊಂಡಿದ್ದ ಪ್ರತಿಭಟನಕಾರರು ಪೊಲೀಸರ ಎರಡು ವಾಹನಗಳನ್ನು ಧ್ವಂಸಗೊಳಿಸಿದರು. ತಾತ್ಕಾಲಿಕ ಸ್ವಾಗತ ಕೊಠಡಿ, ನಿಯಂತ್ರಣ ಕೊಠಡಿ ಮತ್ತು ಸಂಸತ್ ಕಟ್ಟಡದ ಮುಂಭಾಗ ನಿರ್ಮಿಸಲಾಗಿರುವ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದರು.

ರೊಚ್ಚಿಗೆದ್ದಿದ್ದ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು. ಅಶ್ರುವಾಯು ಸಿಡಿಸಿ ಅವರನ್ನು ಸಂಸತ್ತಿನ ಆವರಣದಿಂದ ಹೊರಕಳುಹಿಸಿದರು.

ಮಧ್ಯಂತರ ಸರ್ಕಾರ ಸ್ಥಾಪಿಸಿದ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವಿನ ಸುದೀರ್ಘ ಮಾತುಕತೆಯ ನಂತರ ಜುಲೈ ಚಾರ್ಟರ್‌ ರಚಿಸಲಾಗಿದೆ.

ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್ ಆಡಳಿತದ ಪ್ರಮುಖ ಮಿತ್ರಪಕ್ಷ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಈ ದಾಖಲೆಗೆ ಸಹಿ ಹಾಕುವುದಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.