
ಮೋತಲೆಬ್ ಸಿಕ್ದಾರ್ (42)
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ.
ಢಾಕಾದ ನೈರುತ್ಯ ಭಾಗ ಖುಲ್ನಾ ನಗರದಲ್ಲಿ ನಿನ್ನೆ ಡಿಸೆಂಬರ್ 21 ರಂದು ಮೋತಲೆಬ್ ಸಿಕ್ದಾರ್ (42) ಎನ್ನುವ ಯುವ ನಾಯಕನನ್ನು ಆತನ ಮನೆ ಬಳಿ ಆಗಂತುಕರು ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಮೋತಲೆಬ್ ಸಿಕ್ದಾರ್ ನ್ಯಾಷನಲ್ ಸಿಟಿಜನ್ ಪಾರ್ಟಿಯ ಖುಲ್ನಾ ನಗರದ ಅಧ್ಯಕ್ಷ ಆಗಿದ್ದರು ಎಂದು ಆ ಪಕ್ಷದ ನಾಯಕ ಮಾಹ್ಮುದಾ ಮಿತು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಿಕ್ದಾರ್ ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಿಲ್ಲ, ಹಂತಕರು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸ್ಥಳೀಯ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಡಿ.12ರಂದು ಸಮಾವೇಶವೊಂದರಲ್ಲಿ ಬಾಂಗ್ಲಾದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರನ್ನೂ ಹಂತಕರು ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಘಟನೆ ಬಾಂಗ್ಲಾದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ. ಶರೀಫ್ ಉಸ್ಮಾನ್ ಹಾದಿ ಹಾಗೂ ಸಿಕ್ದಾರ್ ಹಸೀನಾ ಸರ್ಕಾರದ ಹಾಗೂ ಭಾರತ ವಿರೋಧಿ ನಿಲುವು ಹೊಂದಿದ್ದರು ಎನ್ನಲಾಗಿದೆ.
ಶರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.
ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.
ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೀಪು ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾರತ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.