
ಢಾಕಾ: ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ, ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಜಿಯಾ ಅವರಿಗೆ 10 ವರ್ಷ ಸಜೆ ವಿಧಿಸಿ ಬಾಂಗ್ಲಾದ ಹೈಕೋರ್ಟ್ ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಾ. ಸೈಯದ್ ರೆಫಾತ್ ಅಹ್ಮದ್ ವಜಾ ಮಾಡಿದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ 79 ವರ್ಷದ ಖಲೀದಾ ಜಿಯ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಿಯಾ ಅವರಲ್ಲದೇ ಪಕ್ಷದ ಪ್ರಭಾರ ಅಧ್ಯಕ್ಷ ತಾರಿಖ್ ರೆಹಮಾನ್ ಮತ್ತು ಇತರೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತು.
ಜಿಯಾ ಅನಾಥರ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಕಾರಣ ಈ ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಇದು ದ್ವೇಷದ ಪ್ರಕರಣ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಢಾಕಾದ ವಿಶೇಷ ನ್ಯಾಯಾಧೀಶರ ಕೋರ್ಟ್ 2018ರ ಫೆಬ್ರುವರಿ 8ರಂದು ಜಿಯಾ ಅವರಿಗೆ ಐದು ವರ್ಷ ಸಜೆ ವಿಧಿಸಿ ಆದೇಶಿಸಿತ್ತು. ಜಿಯಾ ಅವರ ಪುತ್ರ ತಾರಿಖ್ ಸೇರಿ ಇತರೆ ಐವರಿಗೆ 10 ವರ್ಷ ಸಜೆ ಮತ್ತು ದಂಡವನ್ನು ವಿಧಿಸಿತ್ತು.
ಜಿಯಾ ಅವರು ಸದ್ಯ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.