ADVERTISEMENT

ಪಾಕ್: 11 ಪೊಲೀಸರನ್ನು ಬಿಡುಗಡೆ ಮಾಡಿದ ನಿಷೇಧಿತ ಟಿಎಲ್‌ಪಿ

ಮೊದಲ ಸುತ್ತಿನ ಮಾತುಕತೆ ಯಶಸ್ವಿ: ಟಿಎಲ್‌ಪಿ ನಾಯಕನ ಬಿಡುಗಡೆಗೆ ಆಗ್ರಹ

ಪಿಟಿಐ
Published 19 ಏಪ್ರಿಲ್ 2021, 14:27 IST
Last Updated 19 ಏಪ್ರಿಲ್ 2021, 14:27 IST
ಟಿಎಲ್‌ಪಿ ನಾಯಕ ಬಂಧನ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಬೆಂಬಲಿಸಿ ಇಸ್ಲಾಮಾಬಾದಿನ ಫ್ರಾನ್ಸ್ ರಾಯಭಾರಿ ಕಚೇರಿ ಮುಂದೆ ಸೋಮವಾರ ಹಲವು ಸಂಘಟನೆಗಳ ಕಾರ್ಯಕರ್ತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ಟಿಎಲ್‌ಪಿ ನಾಯಕ ಬಂಧನ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಬೆಂಬಲಿಸಿ ಇಸ್ಲಾಮಾಬಾದಿನ ಫ್ರಾನ್ಸ್ ರಾಯಭಾರಿ ಕಚೇರಿ ಮುಂದೆ ಸೋಮವಾರ ಹಲವು ಸಂಘಟನೆಗಳ ಕಾರ್ಯಕರ್ತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ಲಾಹೋರ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದೊಂದಿಗೆ ನಡೆದ ಮೊದಲ ಮಾತುಕತೆಯ ಸುತ್ತಿನ ಫಲವಾಗಿ ನಿಷೇಧಿತ ತೆಹ್ರೀಕ್‌ –ಎ– ಲ್ಯಾಬ್‌ಬೈಕ್ ಪಾಕಿಸ್ತಾನ (ಟಿಎಲ್‌ಪಿ) ಉಗ್ರ ಸಂಘಟನೆಯು ಒತ್ತೆಯಾಳಾಗಿರಿಸಿಕೊಂಡಿದ್ದ 11 ಪೊಲೀಸರನ್ನು ಬಿಡುಗಡೆ ಮಾಡಿದೆ.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ಪ್ರಕಟವಾದ ಧರ್ಮನಿಂದೆಯ ವ್ಯಂಗ್ಯಚಿತ್ರ ಪ್ರಕಟವಾಗಿದ್ದಕ್ಕೆ ಪಾಕಿಸ್ತಾನದಲ್ಲಿರುವ ಫ್ರಾನ್ಸ್‌ ರಾಯಭಾರಿಯನ್ನು ಹೊರಹಾಕುವ ಬೇಡಿಕೆಯನ್ನು ಟಿಎಲ್‌ಪಿಯು ಮುಂದಿಟ್ಟಿದ್ದು, ಇದಕ್ಕೆ ಪಾಕಿಸ್ತಾನ ಸರ್ಕಾರ ಮಣಿದಿದೆ ಎನ್ನಲಾಗಿದೆ.

ಕಳೆದ ವಾರ ಟಿಎಲ್‌ಪಿಯನ್ನು ನಿಷೇಧಿತ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಆ ಸಂಘಟನೆಯ ಬ್ಯಾಂಕ್ ಖಾತೆಗಳನ್ನೂ ಸರ್ಕಾರ ಸ್ಥಗಿತಗೊಳಿಸಿತ್ತು. ಅಲ್ಲದೇ, ಈ ಸಂಘಟನೆಯೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲವೆಂದೂ ಪಾಕಿಸ್ತಾನ ಸರ್ಕಾರ ಹೇಳಿತ್ತು.

ADVERTISEMENT

ಆದರೆ, ಭಾನುವಾರ ಲಾಹೋರಿನಲ್ಲಿ ಪೊಲೀಸರು ಮತ್ತು ಟಿಎಲ್‌ಪಿ ಸಂಘಟನೆಯ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಟಿಎಲ್‌ಪಿಯು 11 ಪೊಲೀಸರನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿತ್ತು. ಟಿಎಲ್‌ಪಿಯ ನಾಯಕನನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೆ ವಿವಿಧ ಸಂಘಟಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. ಇದಕ್ಕೆ ವ್ಯಾಪಾರಿಗಳು ಬೆಂಬಲ ನೀಡಿದ್ದರು.

ಸೋಮವಾರ ನಡೆದ ಮಾತುಕತೆಯ ಸಂದರ್ಭದಲ್ಲಿ ಟಿಎಲ್‌ಪಿ ನಾಯಕರು ಫ್ರಾನ್ಸ್ ರಾಯಭಾರಿಯನ್ನು ಹೊರಹಾಕುವುದು, ಟಿಎಲ್‌ಪಿ ಮುಖ್ಯಸ್ಥ ಸಾದ್ ರಾಜ್ವಿಯನ್ನು ಬಿಡುಗಡೆ ಮಾಡುವುದು, ಟಿಎಲ್‌ಪಿ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವುದು ಹಾಗೂ ಸಂಘಟನೆಯ ಎಲ್ಲಾ ಕಾರ್ಯಕರ್ತರನ್ನು ಬಿಡುಗಡೆ ಮಾಡಿ, ಅವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಒಂದೇ ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮಂಗಳವಾರ ಪ್ರತಿಭಟನೆ ಕರೆ ನೀಡುವುದಾಗಿಯೂ ಟಿಎಲ್‌ಪಿ ಬೆದರಿಕೆಯೊಡ್ಡಿದೆ.

‘ಪ್ರಧಾನಿ ಇಮ್ರಾನ್ ಖಾನ್ ಅವರು ಟಿಎಲ್‌ಪಿಯ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಲಿದ್ದಾರೆ. ಲಾಹೋರಿನಲ್ಲಿ ಪ್ರಚಾರ ಮಾಡುವ ಟಿಎಲ್‌ಪಿ ಕಾರ್ಯಕರ್ತರ ವಿರುದ್ಧ ಯಾವುದೇ ರೀತಿಯ ಪೊಲೀಸ್ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆಯ ಮೇರೆಗೆ 11 ಪೊಲೀಸರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.