ADVERTISEMENT

ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಿದ ಬ್ರಿಟನ್‌ ಸರ್ಕಾರ

ಐಎಎನ್ಎಸ್
Published 22 ಮಾರ್ಚ್ 2023, 11:50 IST
Last Updated 22 ಮಾರ್ಚ್ 2023, 11:50 IST
ಪ್ರತಿಭಟನೆ
ಪ್ರತಿಭಟನೆ   

ಲಂಡನ್‌: ‘ಬ್ರಿಟನ್‌ ಸರ್ಕಾರವು ಭಾರತೀಯ ಹೈಕಮಿಷನ್‌ಗೆ ಅಗತ್ಯ ಭದ್ರತೆ ಒದಗಿಸಿದೆ ಎಂದು ಬ್ರಿಟನ್‌ನ ಉನ್ನತ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಭಾರತೀಯ ಹೈಕಮಿಷನ್‌ ಎದುರು ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೈಕಮಿಷನ್‌ ಎದುರು ಬ್ಯಾರಿಕೇಡ್‌ಗಳನ್ನು ಹಾಕಿರುವುದು ಹಾಗೂ ಪೊಲೀಸ್‌ ಸಿಬ್ಬಂದಿ ಇರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ADVERTISEMENT

ಖಾಲಿಸ್ತಾನ ಪರವಾಗಿ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು ಮತ್ತೆ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ.

‘ಖಾಲಿಸ್ತಾನ ಪರವಾಗಿ ಭಾನುವಾರ ಹೋರಾಟ ನಡೆಸಿದ್ದ ಪ್ರತ್ಯೇಕತಾವಾದಿಗಳು ಭಾರತೀಯ ಹೈಕಮಿಷನ್‌ ಎದುರು ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಬ್ರಿಟನ್‌ ಸರ್ಕಾರ ಭದ್ರತೆ ನೀಡಿಲ್ಲ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೂ ಬ್ರಿಟನ್‌ನಲ್ಲಿರುವ ಭಾರತೀಯರು ಖಂಡನೆ ವ್ಯಕ್ತಪಡಿಸಿದ್ದರು.

ಅದೇ ಜಾಗದಲ್ಲಿ ಮತ್ತೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಲಾಗಿದೆ. ಜೊತೆಗೆ ಹೈಕಮಿಷನ್‌ ಕಟ್ಟಡದ ಎದುರು ಬೃಹದಾಕಾರದ ಮತ್ತೊಂದು ತ್ರಿವರ್ಣ ಧ್ವಜವನ್ನು ಕಟ್ಟಲಾಗಿದೆ ಎಂದು ಬ್ರಿಟನ್‌ ಅಧಿಕಾರಿಗಳು ಹೇಳಿದ್ದರು. ‘ಪ್ರತ್ಯೇಕತಾವಾದಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ಹಿಂಸಾಚಾರ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಸರ್ಕಾರವು ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್‌ಸಿಂಗ್‌ ಬಂಧನಕ್ಕೆ ಕಾರ್ಯಾಚರಣೆ ಶುರುಮಾಡಿರುವುದೇ ಬ್ರಿಟನ್‌ನಲ್ಲಿನ ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ ಮಾಡಲು ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.