ADVERTISEMENT

ಚೀನಾ: ಕೋವಿಡ್‌ ಇಳಿಕೆ, ನಿರ್ಬಂಧಗಳ ತೆರವು

ಏಜೆನ್ಸೀಸ್
Published 29 ಮೇ 2022, 12:19 IST
Last Updated 29 ಮೇ 2022, 12:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ ಮತ್ತು ವಾಣಿಜ್ಯ ನಗರಿ ಶಾಂಘೈನಲ್ಲಿ ಕೆಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ಸಾರ್ವಜನಿಕ ಉದ್ಯಾನ, ಜಿಮ್‌ಗಳು ಮತ್ತು ಸಿನಿಮಾ ಹಾಲ್‌ ಅನ್ನು ಭಾನುವಾರ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲಾಯಿತು. ಬೀಜಿಂಗ್‌ ಗ್ರಾಮಾಂತರ ಪ್ರದೇಶದಲ್ಲಿರುವ ‘ಚೀನಾದ ಮಹಾಗೋಡೆ’ ವೀಕ್ಷಣೆಗೆ ಸೋಮವಾರದಿಂದ ಪ್ರವಾಸಿಗರಿಗೆ ತೆರೆಯಲಿದೆ. ರೆಸ್ಟೋರೆಂಟ್‌ಗಳನ್ನು ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಪಾರ್ಸೆಲ್‌ ಮತ್ತು ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಶಾಂಘೈ ನಗರದಲ್ಲೂ ಹಂತ ಹಂತವಾಗಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಕೊರೊನಾ ಸಂಕಷ್ಟ ದೂರವಾಗಿದೆ ಎಂಬ ಸುಳಿವು ಇದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೊರೊನಾ ಪ್ರಕರಣಗಳು ತೀವ್ರವಾಗಿ ಇಳಿಕೆಯಾಗುತ್ತಿದ್ದರೂ ವಿಶೇಷ ಪಾಸ್‌ ಇದ್ದವರು ಮಾತ್ರ ನಿಯಮಿತ ಸಮಯದಲ್ಲಿ ಓಡಾಡಲು ಅವಕಾಶವಿದೆ.

ADVERTISEMENT

ಚೀನಾದಲ್ಲಿ ಶನಿವಾರ 293 ಹೊಸ ಪ್ರಕರಣಗಳು ವರದಿಯಾಗಿವೆ. ಶಾಂಘೈನಲ್ಲಿ 122, ಬೀಜಿಂಗ್‌ನಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಕಠಿಣ ನಿಯಮಗಳ ಸಂಕಷ್ಟಕ್ಕೆ ಸಿಲುಕಿದ್ದ ಬೀಜಿಂಗ್‌ ಜನರು ಭಾಗಶಃ ಅಂಗಡಿ ಮುಂಗಟ್ಟಗಳು ಮತ್ತು ಕಚೇರಿಗಳನ್ನು ತೆರೆಯಲು ಅವಕಾಶ ನೀಡಿರುವುದನ್ನು ಸ್ವಾಗತಿಸಿದ್ದಾರೆ. ಅಂಗಡಿ ಮಾಲೀಕರು ಮತ್ತು ಕೆಲಸಗಾರರು ಸಹಜ ಜೀವನಕ್ಕೆ ಮರಳಲು ಉತ್ಸುಕರಾಗಿದ್ದಾರೆ.

ಲಾಕ್‌ಡೌನ್‌ ಮತ್ತು ಶೂನ್ಯ ಕೋವಿಡ್‌ ತಂತ್ರದಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳಿಂದ ಇಲ್ಲಿನ ಜನರು ಹಲವು ದಿನಗಳಿಂದ ತೀವ್ರ ಹತಾಶೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.