ADVERTISEMENT

ರಾಹುಲ್ ಅನರ್ಹತೆ: ಗಾಂಧಿ ತತ್ವಕ್ಕೆ ಎಸಗಿದ ದ್ರೋಹ ಎಂದ ಅಮೆರಿಕ ಕಾಂಗ್ರೆಸ್ ನಾಯಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2023, 3:01 IST
Last Updated 25 ಮಾರ್ಚ್ 2023, 3:01 IST
ರಾಹುಲ್‌ ಗಾಂಧಿ ಮತ್ತು ರೋ ಖನ್ನಾ
ರಾಹುಲ್‌ ಗಾಂಧಿ ಮತ್ತು ರೋ ಖನ್ನಾ   

ವಾಷಿಂಗ್ಟನ್: ವಯನಾಡ್‌ ಸಂಸದ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ‘ಗಾಂಧಿ ತತ್ವಕ್ಕೆ ಎಸಗಿದ ದ್ರೋಹ’ ಎಂದು ಭಾರತ ಮೂಲದ ಅಮೆರಿಕದ ಕಾಂಗ್ರೆಸ್‌ ಸದಸ್ಯ ರೋ ಖನ್ನಾ ಹೇಳಿದ್ದಾರೆ.

ಸೂರತ್‌ನ ನ್ಯಾಯಾಲಯವೊಂದು ರಾಹುಲ್‌ ಗಾಂಧಿ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆ ಪ್ರಕಟಿಸಿದ 24 ತಾಸುಗಳೊಳಗೆ ಅನರ್ಹತೆ ನಿರ್ಧಾರ ಕೈಗೊಳ್ಳಲಾಗಿದೆ.

‘ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಹಾಕಿರುವುದು ಗಾಂಧಿ ತತ್ವಗಳಿಗೆ ಮತ್ತು ಭಾರತದ ಮೌಲ್ಯಗಳಿಗೆ ಎಸಗಿದ ದೊಡ್ಡ ದ್ರೋಹವಾಗಿದೆ’ ಎಂದು ರೋ ಖನ್ನಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ನನ್ನ ಅಜ್ಜ (ಮಹಾತ್ಮ ಗಾಂಧಿ) ಹಲವು ವರ್ಷಗಳ ಕಾಲ ಜೈಲಿನಲ್ಲಿ ಇದ್ದದ್ದು, ತ್ಯಾಗ ಮಾಡಿದ್ದು ಇದಕ್ಕಾಗಿ ಅಲ್ಲ’ ಎಂದು ಖನ್ನಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಖನ್ನಾ ಅವರು ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸಿಲಿಕಾನ್ ವ್ಯಾಲಿಯನ್ನು ಪ್ರತಿನಿಧಿಸುತ್ತಿದ್ದಾರೆ.

ರಾಹುಲ್‌ ಗಾಂಧಿಯನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿರುವ ಖನ್ನಾ, ‘ಭಾರತೀಯ ಪ್ರಜಾಪ್ರಭುತ್ವದ ಪರವಾಗಿ ನಿರ್ಧಾರ ಹಿಂತೆಗೆದುಕೊಳ್ಳುವ ಶಕ್ತಿ ನಿಮಗೆ ಇದೆ’ ಎಂದು ತಿಳಿಸಿದ್ದಾರೆ.

‘ಇದು ಭಾರತದ ಪ್ರಜಾಪ್ರಭುತ್ವದ ಕರಾಳ ದಿನವಾಗಿದೆ. ರಾಹುಲ್ ಗಾಂಧಿಯನ್ನು ಅನರ್ಹಗೊಳಿಸುವ ಮೂಲಕ, ಮೋದಿ ಸರ್ಕಾರವು ಎಲ್ಲೆಡೆ ಭಾರತೀಯರ ವಾಕ್ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಅಮೆರಿಕದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಉಪಾಧ್ಯಕ್ಷ ಜಾರ್ಜ್ ಅಬ್ರಹಾಂ ಖಂಡನೆ ವ್ಯಕ್ತಪಡಿಸಿದ್ದಾರೆ.

52 ವರ್ಷದ ರಾಹುಲ್‌ ಗಾಂಧಿ, ನಾಲ್ಕು ಬಾರಿ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದರು.

ಸೂರತ್‌ನ ಮುಖ್ಯ ನ್ಯಾಯಾಂಗೀಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷ ಸಜೆ ನೀಡಿರುವ ಕಾರಣ ಅವರ ಲೋಕಸಭಾ ಸದಸ್ಯತ್ವ ರದ್ದಾಗಿದೆ ಎಂದು ಲೋಕಸಭಾ ಕಾರ್ಯಾಲಯವು ಅಧಿ ಸೂಚನೆಯಲ್ಲಿ ತಿಳಿಸಿದೆ. ತೀರ್ಪು ಪ್ರಕಟವಾದ 2023ರ ಮಾರ್ಚ್‌ 23ರಿಂದಲೇ ಅನರ್ಹತೆ ಅನ್ವಯ ಎಂದೂ ಹೇಳಲಾಗಿದೆ.

ಉನ್ನತ ನ್ಯಾಯಾಲಯವು ಸೂರತ್‌ ನ್ಯಾಯಾಲಯದ ತೀರ್ಪಿಗೆ ತಡೆ ನೀಡದೇ ಇದ್ದರೆ, ಈಗಿನ ಅನರ್ಹತೆಯಿಂದಾಗಿ ರಾಹುಲ್ ಅವರು ಎಂಟು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ಲೋಕಸಭೆಗೆ 2019ರಲ್ಲಿ ನಡೆದ ಚುನಾ ವಣಾ ಪ್ರಚಾರದಲ್ಲಿ ರಾಹುಲ್‌ ಪ್ರಶ್ನಿಸಿದ್ದರು. ಸೂರತ್‌ನ ಶಾಸಕ ಪೂರ್ಣೇಶ್‌ ಮೋದಿ ಅವರು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ದ್ವೇಷದ ರಾಜಕಾರಣ ಎಂದ ಕಾಂಗ್ರೆಸ್
ಇದು ಬಿಜೆಪಿಯ ದ್ವೇಷದ ರಾಜಕಾರಣ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾನೂನು ಮತ್ತು ರಾಜಕೀಯ ನೆಲೆಯಲ್ಲಿ ಇದರ ವಿರುದ್ಧ ಹೋರಾಟ ಮಾಡುವುದಾಗಿ ಶಪಥ ಮಾಡಿವೆ. ಈ ಕುರಿತು ದೇಶದಾದ್ಯಂತ ಜನಾಂದೋಲನ ರೂಪಿಸುವುದಾಗಿ ಕಾಂಗ್ರೆಸ್ ಹೇಳಿದೆ.

ವಿರೋಧ ಪಕ್ಷಗಳ ಆರೋಪವನ್ನು ಬಿಜೆಪಿ ನಿರಾಕರಿಸಿದೆ ಮತ್ತು ಅನರ್ಹತೆಯು ಕಾನೂನುಬದ್ಧವಾಗಿಯೇ ನಡೆದಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.