ADVERTISEMENT

ಭೂತಾನ್‌ನಲ್ಲಿ ಸಲಿಂಗಕಾಮ ಅಪರಾಧವಲ್ಲ: ಕಾನೂನು ತಿದ್ದುಪಡಿಗೆ ಅನುಮೋದನೆ

ಏಜೆನ್ಸೀಸ್
Published 11 ಡಿಸೆಂಬರ್ 2020, 10:39 IST
Last Updated 11 ಡಿಸೆಂಬರ್ 2020, 10:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಭೂತಾನ್‌ನಲ್ಲಿ ಇನ್ನು ಮುಂದೆ ಸಲಿಂಗ ಕಾಮ ಅಪರಾಧವಲ್ಲ. ಈ ಸಂಬಂಧ ಕಾನೂನಿಗೆ ತಂದ ತಿದ್ದುಪಡಿಗೆ ಭೂತಾನ್‌ ಸಂಸತ್ ಅನುಮೋದನೆ ನೀಡಿದೆ.

ಈ ಮೊದಲು ಸಲಿಂಗ ಕಾಮವನ್ನು ‘ಅಸ್ವಾಭಾವಿಕ ಲೈಂಗಿಕತೆ’ ಎಂದು ಪರಿಗಣಿಸಲಾಗುತ್ತಿತ್ತಲ್ಲದೇ, ದಂಡವನ್ನೂ ವಿಧಿಸಲಾಗುತ್ತಿತ್ತು.

ಗುರುವಾರ ಸಂಸತ್‌ನಲ್ಲಿ ಮಂಡನೆಯಾದ ತಿದ್ದುಪಡಿ ಮಸೂದೆ ಪರವಾಗಿ 69 ಸಂಸದರ ಪೈಕಿ 63 ಸಂಸದರು ಮತ ಚಲಾಯಿಸಿದರು. ಭೂತಾನ್‌ ದೊರೆ ಅಂಕಿತ ಹಾಕಿದ ನಂತರ ಇದು ಕಾನೂನಾಗಿ ಜಾರಿಗೆ ಬರಲಿದೆ.

ADVERTISEMENT

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಬದಲಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವ ತಾಶಿ ತ್ಸೆಟೆನ್‌ ಪ್ರತಿಕ್ರಿಯಿಸಿ, ‘ನನ್ನ ಖುಷಿಗೆ ಪಾರವೇ ಇಲ್ಲ. ಆದಷ್ಟೂ ಶೀಘ್ರವೇ ಈ ತಿದ್ದುಪಡಿಗೆ ದೊರೆ ಅಂಕಿತ ಹಾಕಬೇಕು’ ಎಂದರು.

‘ಈ ತಿದ್ದುಪಡಿಯಿಂದಾಗಿ ಭೂತಾನ್‌ನಲ್ಲಿರುವ ಎಲ್‌ಜಿಬಿಟಿಐಕ್ಯೂ ಸಮುದಾಯದವರು (ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗ ಪರಿವರ್ತಿತರು) ಇನ್ನು ಮುಂದೆ ಉತ್ತಮ ಹಾಗೂ ಗೌರವಯುತ ಜೀವನ ನಡೆಸಬಹುದು. ಸಾಮಾಜಿಕ ನಿಂದನೆ ಹಾಗೂ ತಾರತಮ್ಯದಿಂದ ಮುಕ್ತಿ ಸಿಗಲಿದೆ’ ಎಂದೂ ಹೇಳಿದರು.

ಎಲ್‌ಜಿಬಿಟಿಐಕ್ಯೂ ಸಮುದಾಯದ ಹಕ್ಕುಗಳಿಗಾಗಿ ಹೋರಾಡುವ ‘ಔಟ್‌ರೈಟ್‌ ಆ್ಯಕ್ಷನ್‌ ಇಂಟರ್‌ನ್ಯಾಷನಲ್‌’ ಸಂಘಟನೆಯ ಕಾರ್ಯಕಾರಿ ನಿರ್ದೇಶಕಿ ಜೆಸ್ಸಿಕಾ ಸ್ಟರ್ನ್, ‘ಭೂತಾನ್‌ ಸಂಸತ್‌ ತಿದ್ದುಪಡಿಗೆ ಅನುಮೋದನೆ ನೀಡಿರುವುದು ದೊಡ್ಡ ಸಾಧನೆಯೇ ಸರಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.