ADVERTISEMENT

ವಿಶೇಷ ಆರ್ಥಿಕ ಪ್ಯಾಕೇಜ್‌; ಬೈಡೆನ್‌ರ ಪ್ರಾರಂಭಿಕ ಆಡಳಿತ ಸುಗಮ ನಿರೀಕ್ಷೆ

ಕೋವಿಡ್‌ ಹಿನ್ನೆಲೆಯಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ

ಏಜೆನ್ಸೀಸ್
Published 23 ಡಿಸೆಂಬರ್ 2020, 7:44 IST
Last Updated 23 ಡಿಸೆಂಬರ್ 2020, 7:44 IST
ಜೋ ಬೈಡೆನ್
ಜೋ ಬೈಡೆನ್   

ವಾಷಿಂಗ್ಟನ್‌: ಕೋವಿಡ್‌–19ನಿಂದಾಗಿ ಕುಸಿದಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ವಿಶೇಷ ಪ್ಯಾಕೇಜ್‌ ಘೋಷಣೆ ಸೇರಿದಂತೆ ಶ್ವೇತಭವನ ವರ್ಷಾಂತ್ಯದ ವೇಳೆಗೆ ಪ್ರಕಟಿಸಿರುವ ಕ್ರಮಗಳಿಂದ, ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರ ಆರಂಭಿಕ ದಿನಗಳ ಆಡಳಿತ ಸುಲಲಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಅವಧಿಯಲ್ಲಿ, ಆಡಳಿತದ ವಿವಿಧ ಹಂತಗಳಲ್ಲಿ ಕಂಡು ಬಂದಿದ್ದ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಶ್ವೇತಭವನದ ಗತವೈಭವವನ್ನು ಮರುಸ್ಥಾಪಿಸಲು ಶ್ರಮಿಸುವ ಸುಳಿವನ್ನು ಬೈಡೆನ್‌ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೈಡೆನ್‌ ಅವರ ಭವಿಷ್ಯದ ಕ್ರಮಗಳಿಗೆ ಈಗ ಘೋಷಿಸಲಾಗಿರುವ ಪ್ಯಾಕೇಜ್‌ ಸಹ ನೆರವಾಗಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ADVERTISEMENT

‘ದೇಶದ ಹಿತದೃಷ್ಟಿಯಿಂದ ಕೈಗೊಳ್ಳುವ ಕೆಲವು ನಿರ್ಧಾರಗಳಿಗೆ ಪಕ್ಷಭೇದ ಮರೆತು ನಾವು ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಉಭಯ ಸದನಗಳ ಸದಸ್ಯರು ವಿಶೇಷ ಪ್ಯಾಕೇಜ್‌ಗೆ ಅನುಮೋದನೆ ನೀಡುವ ಮೂಲಕ ತೋರಿದ್ದಾರೆ. ಬರುವ ಜನವರಿ ಅಥವಾ ಫೆಬ್ರುವರಿಯಲ್ಲಿ ಇಂಥ ಮತ್ತೊಂದು ಪ್ಯಾಕೇಜ್‌ ಘೋಷಿಸಬೇಕಾಗುತ್ತದೆ. ಆಗಲೂ ಇದೇ ರೀತಿ ಬೆಂಬಲ ಸಿಗಲಿದೆ ಎಂದು ಆಶಿಸುತ್ತೇನೆ‘ ಎಂದು ಬೈಡನ್‌ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್‌ನ ಎರಡೂ ಸದನಗಳ ಬಹುತೇಕ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ಇರಲಿಲ್ಲ. ಆಡಳಿತದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳ ಸಾಮರ್ಥ್ಯವನ್ನು ಸಹ ಸಮರ್ಥವಾಗಿ ಬಳಸಿಕೊಳ್ಳಲಾಗಿರಲಿಲ್ಲ. ಇಂಥ ಧೋರಣೆಯನ್ನು ಬದಲಾಯಿಸಲಾಗುವುದು ಎಂಬ ಸುಳಿವನ್ನು ಸಹ ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.