ADVERTISEMENT

ಇಸ್ರೇಲ್–ಹಮಾಸ್ ಯುದ್ಧವಿರಾಮ: ಬೈಡನ್–ನೆತನ್ಯಾಹು ದೂರವಾಣಿ ಮೂಲಕ ಚರ್ಚೆ

ಏಜೆನ್ಸೀಸ್
Published 13 ಜನವರಿ 2025, 2:46 IST
Last Updated 13 ಜನವರಿ 2025, 2:46 IST
<div class="paragraphs"><p>ಜೋ ಬೈಡನ್ ಮತ್ತು&nbsp;ಬೆಂಜಮಿನ್ ನೆತನ್ಯಾಹು</p></div>

ಜೋ ಬೈಡನ್ ಮತ್ತು ಬೆಂಜಮಿನ್ ನೆತನ್ಯಾಹು

   

ಗಾಜಾಪಟ್ಟಿ: ಇಸ್ರೇಲ್-ಹಮಾಸ್ ಯುದ್ಧ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಬರುವ ಪ್ರಯತ್ನಗಳ ಕುರಿತು ಭಾನುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಕಳೆದ ವರ್ಷದಿಂದ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದ್ದು, ಇನ್ನೇನು ಒಪ್ಪಂದ ಆಗಿಯೇಬಿಟ್ಟಿತು ಎನ್ನುವಷ್ಟರಲ್ಲಿ ಮಾತುಕತೆಗಳು ಸ್ಥಗಿತಗೊಳ್ಳುತ್ತಿವೆ.

ADVERTISEMENT

ಇಸ್ರೇಲ್‌ನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಬೈಡನ್‌ ಅವರ ಉನ್ನತ ಸಲಹೆಗಾರ ಬ್ರೆಟ್ ಮೆಕ್‌ಗುರ್ಕ್ ಇಬ್ಬರೂ ಕತಾರ್ ರಾಜಧಾನಿ ದೋಹಾದಲ್ಲಿದ್ದು, ಚರ್ಚೆಯಲ್ಲಿ ತೊಡಗಿದ್ದಾರೆ. ಈ ನಡುವೆ ಬೈಡನ್ ಮತ್ತು ನೆತನ್ಯಾಹು ನಡುವೆ ದೂರವಾಣಿ ಮಾತುಕತೆ ನಡೆದಿದೆ.

ಮೆಕ್‌ಗುರ್ಕ್ ಎರಡೂ(ಇಸ್ರೇಲ್, ಹಮಾಸ್) ಕಡೆಯವರಿಗೆ ಪ್ರಸ್ತುತಪಡಿಸಬೇಕಾದ ಅಂತಿಮ ವಿವರಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಬೈಡನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸಿಎನ್‌ಎನ್‌ನ ಸ್ಟೇಟ್ ಆಫ್ ದಿ ಯೂನಿಯನ್‌ಗೆ ತಿಳಿಸಿದ್ದಾರೆ. ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಮಾತುಕತೆ ಅಂತಿಮವಾಗಬಹುದು ಎಂದೂ ತಿಳಿಸಿದ್ದಾರೆ.

‘ನಾವು ಮಾತುಕತೆಯ ಅಂತಿಮ ಹಂತಕ್ಕೆ ತಲುಪಿದ್ದೇವೆ. ಮಾತುಕತೆ ಮತ್ತಷ್ಟು ಪ್ರಗತಿ ಕಾಣಬೇಕಿದೆ. ಅಂತಿಮ ರೇಖೆ ದಾಟಿದಾಗಲೆ ಯಶಸ್ಸು ಸಿಗಲಿದೆ’ಎಂದಿದ್ದಾರೆ.

ದೂರವಾಣಿ ಚರ್ಚೆ ಬಗ್ಗೆ ಬೈಡನ್ ಮತ್ತು ನೆತನ್ಯಾಹು ಕಚೇರಿಗಳೂ ಸ್ಪಷ್ಟಪಡಿಸಿವೆ.

15 ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಕೇವಲ ಒಂದು ಸಂಕ್ಷಿಪ್ತ ಕದನ ವಿರಾಮವನ್ನು ಮಾತ್ರ ಸಾಧಿಸಲಾಗಿದೆ. ಅದು ಯುದ್ಧದ ಆರಂಭಿಕ ವಾರಗಳಲ್ಲಿ ಆಗಿತ್ತು. ಈ ವಾರ ಒಪ್ಪಂದ ಆಗುವ ಸಾಧ್ಯತೆ ದಟ್ಟವಾಗಿದೆ. ಟ್ರಂಪ್ ಆಡಳಿತಕ್ಕೆ ರಾಜತಾಂತ್ರಿಕತೆಯನ್ನು ಹಸ್ತಾಂತರಿಸುವ ಮೊದಲು ಒಪ್ಪಂದ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಇಸ್ರೇಲ್ ಒಂದು ಹಂತದ ಯುದ್ಧವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧವಿದ್ದರೆ, ಹಮಾಸ್ ಸಂಪೂರ್ಣ ಸೇನೆ ಹಿಂತೆಗೆತಕ್ಕೆ ಒತ್ತಾಯಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.