ADVERTISEMENT

ಡಬ್ಲ್ಯುಎಚ್‌ಒ ಜೊತೆ ಮತ್ತೆ ಅಮೆರಿಕ ಸೇರ್ಪಡೆಗೆ ಬೈಡನ್ ಆದೇಶ

ಟ್ರಂಪ್ ಆದೇಶ ರದ್ದುಗೊಳಿಸಿ, ಹೊಸ ಆದೇಶ ಜಾರಿ

ಪಿಟಿಐ
Published 21 ಜನವರಿ 2021, 8:12 IST
Last Updated 21 ಜನವರಿ 2021, 8:12 IST
 ವಿಶ್ವ ಆರೋಗ್ಯ ಸಂಸ್ಥೆ- ಸಾಂದರ್ಭಿಕ ಚಿತ್ರ
ವಿಶ್ವ ಆರೋಗ್ಯ ಸಂಸ್ಥೆ- ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್/ವಿಶ್ವಸಂಸ್ಥೆ: ‘ಕೋವಿಡ್‌ 19‘ ಸಾಂಕ್ರಾಮಿಕ ರೋಗ ನಿರ್ವಹಣೆ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ ಅಮೆರಿಕವನ್ನು ಪುನಃ ಸಂಸ್ಥೆಯೊಂದಿಗೆ ಸೇರ್ಪಡೆಗೊಳ್ಳುವಂತೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನ ಬುಧವಾರದಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಹೊರಡಿಸಿದ ಪ್ರಮುಖ ಆದೇಶಗಳ ಪಟ್ಟಿಯಲ್ಲಿ, ಡಬ್ಲ್ಯುಎಚ್‌ಒ ಜತೆ ಅಮೆರಿಕವನ್ನು ಮರುಸೇರ್ಪಡೆಗೊಳಿಸುವ ಆದೇಶವೂ ಸೇರಿದೆ.

ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಅಸಮರ್ಥವಾಗಿದೆ ಮತ್ತು ಪರೋಕ್ಷವಾಗಿ ಚೀನಾ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿ, ಅಮೆರಿಕದೊಂದಿಗಿನ ಸಂಸ್ಥೆಯ ಸಂಪರ್ಕವನ್ನು ಕಡಿತಗೊಳಿಸಿದ್ದರು. ಜೊತೆಗೆ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಹಣಕಾಸು ನೆರವನ್ನೂ ಸ್ಥಗಿತಗೊಳಿಸಿದ್ದರು.

ADVERTISEMENT

ಬೈಡನ್ ಆಡಳಿತ ಈ ಎಲ್ಲ ಆದೇಶವನ್ನು ರದ್ದುಗೊಳಿಸಿ, ಅಮೆರಿಕವನ್ನು ಪುನಃ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸಂಪರ್ಕ ಬೆಳೆಸುವ ಹೊಸ ಆದೇಶ ಹೊರಡಿಸಿದ್ದಾರೆ. ನಂತರ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರಿಗೆ ಪತ್ರ ಬರೆದು, ‘ಅಮೆರಿಕ, ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಉಳಿಯಲು ಉದ್ದೇಶಿಸಿದೆ‘ ಉಲ್ಲೇಖಿಸಿದ್ದಾರೆ.

‘ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮತ್ತು ಜಾಗತಿಕ ಆರೋಗ್ಯ ಸುರಕ್ಷತೆಯ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ಣಾಯಕ ಪಾತ್ರವಹಿಸುತ್ತದೆ. ಜಾಗತಿಕ ಮಟ್ಟದಲ್ಲಿ ಇಂಥ ಸಾಂಕ್ರಾಮಿಕದ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೆ, ಅಮೆರಿಕ ಪೂರ್ಣ ಪ್ರಮಾಣದಲ್ಲಿ ನಾಯಕತ್ವವಹಿಸಿಕೊಳ್ಳುತ್ತದೆ‘ ಎಂದು ಬೈಡನ್ ವಿಶ್ವ ಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‌

ಜಾಗತಿಕವಾಗಿ ನಡೆಯುತ್ತಿರುವ ಕೊರೊನಾ ಸೋಂಕಿನ ವಿರುದ್ಧದ ಲಸಿಕಾ ಅಭಿಯಾನದಲ್ಲಿ ಅಮೆರಿಕ ಪಾಲ್ಗೊಳ್ಳಲಿದೆ ಎಂದು ಬೈಡನ್ ಹೇಳಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರ ಈ ನಡೆಯನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದ್ದಾರೆ. ‘ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬೆಂಬಲಿಸುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.