ADVERTISEMENT

ಕೋವಿಡ್‌ ಬಿಕ್ಕಟ್ಟಿನತ್ತ ಅಮೆರಿಕ; ಲಸಿಕೆ ಹಾಕಿಸಿಕೊಳ್ಳುವುದೇ ಪರಿಹಾರ–ಬೈಡನ್‌

ಏಜೆನ್ಸೀಸ್
Published 22 ಜುಲೈ 2021, 2:30 IST
Last Updated 22 ಜುಲೈ 2021, 2:30 IST
ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್   

ಸಿನ್ಸಿನಾಟಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ತೀವ್ರ ಹತಾಶೆ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೋಂಕು ಮತ್ತೊಮ್ಮೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕನ್ನರು ಲಸಿಕೆಪಡೆಯುವುದು ಅತಿ ಮುಖ್ಯ ಎಂದು ಮನವಿ ಮಾಡಿದ್ದಾರೆ.

ಸಿನ್ಸಿನಾಟಿಯಲ್ಲಿ ಮಾತನಾಡಿದ ಬೈಡನ್, 'ಡೆಲ್ಟಾ ರೂಪಾಂತರದ ಹರಡುವಿಕೆಯು ದೇಶದಾದ್ಯಂತ ಸೋಂಕು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದ್ದರಿಂದ ಲಸಿಕೆ ಪಡೆಯದೇ ಇರುವುದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಲಿದೆ' ಎಂದು ಎಚ್ಚರಿಸಿದ್ದಾರೆ.

'ಲಸಿಕೆ ಹಾಕಿಸಿಕೊಳ್ಳದವರಿಗೆ ಸಾಂಕ್ರಾಮಿಕ ರೋಗ ತಗುಲಲಿದೆ. ಇದು ಅಷ್ಟೇ ಸರಳ' ಎಂದು ಹೇಳಿದರು.

ಮುಂಬರುವ ತಿಂಗಳಲ್ಲಿ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಅನುಮೋದನೆ ನೀಡಲಾಗುವುದು ಎಂದು ಬೈಡನ್ ಆಶಾವಾದ ವ್ಯಕ್ತಪಡಿಸಿದರು.

ಅಮೆರಿಕದಲ್ಲಿ ಅನೇಕ ಮಂದಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಕುರಿತು ಜೋ ಬೈಡನ್ ಅತೀವ ಕಳವಳ ವ್ಯಕ್ತಪಡಿಸಿದ್ದಾರೆ. 'ನೀವು ಲಸಿಕೆ ಹಾಕಿಸಿದರೆ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ, ತೀವ್ರ ನಿಗಾ ಘಟಕದಲ್ಲಿ ದಾಖಲಾಗುವುದಿಲ್ಲ, ನೀವು ಸಾಯುವುದಿಲ್ಲ. ಹಾಗಾಗಿ ತಮ್ಮ ಸಹವರ್ತಿಗಳ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬ ಅಮೆರಿಕನ್ನರು ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯವಾಗಿದೆ' ಎಂದು ಕರೆ ನೀಡಿದ್ದಾರೆ.

ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಳ್ಳದವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ ಹಾಗೂ ಸಾವಿನ ಪ್ರಕರಣ ಕಂಡುಬರುತ್ತಿದೆ. ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಜುಲೈ 6ರಂದು ದೈನಂದಿನ 13,700 ಪ್ರಕರಣಗಳು ದಾಖಲಾಗಿದ್ದರೆ ಮಂಗಳವಾರದಂದು 37,000ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಇದರಿಂದ ಮತ್ತೊಮ್ಮೆಆರೋಗ್ಯ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಡೆಲ್ಟಾ ರೂಪಾಂತರ ಹಾಗೂ ಲಸಿಕೆ ಅಭಿಯಾನವು ನಿಧಾನವಾಗಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದಲ್ಲಿ ಶೇಕಡಾ 56.2ರಷ್ಟು ಮಂದಿ ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ಲಸಿಕೆ ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.