ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು, ಭಾರತೀಯ – ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಶೀಘ್ರದಲ್ಲೇ ಅಧಿಕೃತ ನೇಮಕಾತಿ ಆದೇಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಒಬಾಮ ಆಡಳಿತದಲ್ಲಿ ಈ ಹುದ್ದೆಗೆ ನಿಯೋಜನೆಗೊಂಡಿದ್ದ 43ರ ಹರೆಯದ ವಿವೇಕ್ ಮೂರ್ತಿ ಅವರು, ಟ್ರಂಪ್ ಆಡಳಿತದ ವೇಳೆ ಇದ್ದಕ್ಕಿದ್ದಂತೆ ಈ ಹುದ್ದೆಯಿಂದ ನಿರ್ಗಮಿಸಿದ್ದರು. ಈಗ ಜೋ ಬೈಡನ್ ಅವರ ‘ಕೋವಿಡ್ 19‘ ಸಲಹಾ ಮಂಡಳಿಯ ಮೂವರು ಸಹ ಅಧ್ಯಕ್ಷರ ಸಮಿತಿಯಲ್ಲಿ ಒಬ್ಬರಾಗಿದ್ದಾರೆ.
‘ಅಮೆರಿಕದ ಹೊಸ ಆಡಳಿತದಲ್ಲಿ ಸರ್ಜನ್ ಜನರಲ್ ಹುದ್ದೆಯನ್ನು ನಿರ್ವಹಿಸುವಂತೆ ಅಮೆರಿಕದ ಮಾಜಿ ಪ್ರಧಾನ ಸರ್ಜನ್ ಜನರಲ್ ವಿವೇಕ್ ಎಚ್. ಮೂರ್ತಿ ಅವರನ್ನು ಕೇಳಲಾಗಿದೆ‘ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸರ್ಜನ್ ಜನರಲ್ ಹುದ್ದೆಗೆ ನೇಮಕವಾಗುವವರು ಈ ಸರ್ಕಾರದ ನಾಲ್ಕು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ. ಜತೆಗೆ ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಯಾಗಿರುತ್ತಾರೆ. ಪ್ರಸ್ತುತ ಜೆರೋಮ್ ಆಡಮ್ಸ್ ಈಗಿನ ಸರ್ಜನ್ ಜನರಲ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.