ADVERTISEMENT

ಕೋವಿಡ್‌ ಲಸಿಕೆ ಪೇಟೆಂಟ್ ಕೈಬಿಡುವ ಪ್ರಸ್ತಾವ ತಿರಸ್ಕರಿಸಲು ಒತ್ತಾಯ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಸೆನಟರ್‌ಗಳ ಆಗ್ರಹ

ಪಿಟಿಐ
Published 6 ಮಾರ್ಚ್ 2021, 7:18 IST
Last Updated 6 ಮಾರ್ಚ್ 2021, 7:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್ ವಿರುದ್ಧದ ಲಸಿಕೆಗಳ ಮೇಲಿರುವ ಪೇಟೆಂಟ್‌(ಬೌದ್ಧಿಕ ಆಸ್ತಿ ಹಕ್ಕು) ತೆಗೆದು ಹಾಕುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಸ್ವೀಕರಿಸದಂತೆ ಅಮೆರಿಕ ಸೆನೆಟ್‌ನ ರಿಪಬ್ಲಿಕನ್ ಪಕ್ಷದ ನಾಲ್ವರು ಪ್ರಮುಖ ಸೆನೆಟರ್‌ಗಳು ಅಧ್ಯಕ್ಷ ಜೋ ಬೈಡನ್ ಅವರನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸಲು ಬೌದ್ಧಿಕ ಆಸ್ತಿ ಹಕ್ಕು ತೆಗೆದುಹಾಕುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಒತ್ತಾಯಿಸಿವೆ.

‘ಭಾರತ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳು ಕೋವಿಡ್‌–19ಗೆ ಸಂಬಂಧಿಸಿದ ಯಾವುದೇ ಸಂಶೋಧನೆ ಮೇಲಿನ ಎಲ್ಲ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಪೇಟೆಂಟ್ ಅಥವಾ ಐಪಿಆರ್‌) ತೆಗೆಯುವಂತಹ ಪ್ರಸ್ತಾವವನ್ನು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಮಂಡಿಸುತ್ತಿವೆ. ಇದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ‘ ಎಂದು ನಾಲ್ವರು ರಿಪಬ್ಲಿಕನ್ ಸೆನಟರ್‌ಗಳ ಗುಂಪು ಬೈಡನ್‌ ಅವರಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಸೆನೆಟರ್‌ಗಳಾದ ಮೈಕ್ ಲೀ, ಟಾಮ್‌ ಕಾಟನ್‌, ಜೊನಿ ಎರ್ನೆಸ್ಟ್‌ ಮತ್ತು ಟೊಡ್ಡ್‌ ಯಂಗ್‌ ಅವರು ಬೈಡೆನ್‌ಗೆ ಬರೆದಿರುವ ಈ ಪತ್ರದಲ್ಲಿ ‘ನಮ್ಮ ಅಮೆರಿಕ ಮೂಲದ ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ಮೇಲಿನ ಪೇಟೆಂಟ್‌ ತೆಗೆದು ಹಾಕಿದರೆ, ಲಸಿಕೆ ಉತ್ಪಾದಕರ ಸಂಖ್ಯೆ ದಿಢೀರನೆ ಹೆಚ್ಚಾಗುತ್ತದೆ‘ ಎಂದು ಎಚ್ಚರಿಸಿದ್ದಾರೆ.

‘ಕೋವಿಡ್‌ ಲಸಿಕೆಗಳು ಮತ್ತು ಚಿಕಿತ್ಸೆಗಳಲ್ಲಿ ಕೆಲಸ ಮಾಡಿದ ಪ್ರತಿ ಅಮೆರಿಕದ ಕಂಪನಿಯ ಬೌದ್ಧಿಕ ಆಸ್ತಿಯನ್ನು ತೆಗೆದು ಹಾಕಿದರೆ, ನಮ್ಮ ದೇಶದ ಪ್ರಗತಿಗೆ ಅಡ್ಡಿಯುಂಟಾಗುತ್ತದೆ‘ ಎಂದು ಸೆನೆಟರ್‌ಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.