ADVERTISEMENT

ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್‌ಗೆ ಬೆಂಬಲ: ಜೋ ಬೈಡನ್ ವಾಗ್ದಾನ

ಏಜೆನ್ಸೀಸ್
Published 28 ಜನವರಿ 2022, 2:25 IST
Last Updated 28 ಜನವರಿ 2022, 2:25 IST
ಜೋ ಬೈಡನ್: ಎಎಫ್‌ಪಿ ಚಿತ್ರ
ಜೋ ಬೈಡನ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ವಿರಾಮದ ಒಪ್ಪಂದವಾದ ಒಂದು ದಿನದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ಗೆ ಬೆಂಬಲದ ಭರವಸೆ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬೈಡನ್, ರಷ್ಯಾ ವಿರುದ್ಧದ ಹೋರಾಟದಲ್ಲಿ ಬೆಂಬಲದ ವಾಗ್ದಾನ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಉಕ್ರೇನ್ ಸುತ್ತ 1 ಲಕ್ಷ ಸೇನೆ ನಿಯೋಜಿಸಿದ್ದ ರಷ್ಯಾ ಯುದ್ಧದ ವಾತಾವರಣ ಸೃಷ್ಟಿಸಿತ್ತು. ಬಳಿಕ, ನಡೆದ ರಾಜತಾಂತ್ರಿಕ ಮಾತುಕತೆಯಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಒಪ್ಪಿಗೆ ಸೂಚಿಸಿತ್ತು. ಉಕ್ರೇನ್‌ ಮೇಲೆ ರಷ್ಯಾದ ಮಿಲಿಟರಿ ಒತ್ತಡದ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ರಚಿಸುವ ಮುಂಚೂಣಿಯಲ್ಲಿ ಜೋ ಬೈಡನ್ ಇದ್ದಾರೆ. ಇದು ರಷ್ಯಾದ ಕೆಂಗಣ್ಣಿಗೂ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಝೆಲೆನ್ಸ್‌ಕಿಯೊಂದಿಗಿನ ಮಾತುಕತೆ ವೇಳೆ, ‘ರಷ್ಯಾವು ಉಕ್ರೇನ್ ಅನ್ನು ಮತ್ತಷ್ಟು ಆಕ್ರಮಿಸಲು ಪ್ರಯತ್ನಿಸಿದರೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಅದರ ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕ ಸಿದ್ಧವಿದೆ ಎಂದು ಬೈಡನ್ ಪುನರುಚ್ಚರಿಸಿದರು’ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ADVERTISEMENT

ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಮೆರಿಕದ ಬದ್ಧತೆಯನ್ನು ಬೈಡನ್ ಒತ್ತಿ ಹೇಳಿದರು.

ರಷ್ಯಾದ ಮಿಲಿಟರಿ ನಿಯೋಜನೆಯಿಂದ ಉಂಟಾಗಿರುವ ಒತ್ತಡದ ನಡುವೆ ಉಕ್ರೇನ್‌ನ ಆರ್ಥಿಕತೆಗೆ ಸಹಾಯ ಮಾಡಲು ಹೆಚ್ಚುವರಿ ಸಮಗ್ರ ಆರ್ಥಿಕ ಬೆಂಬಲವನ್ನು ನೀಡಲು ಅಮೆರಿಕ ಯೋಜಿಸಿದೆ ಎಂದು ಬೈಡನ್ ತಿಳಿಸಿದ್ದಾರೆ.

ಉಕ್ರೇನ್ ತೊರೆಯುವಂತೆ ತನ್ನ ನಾಗರಿಕರಿಗೆ ಅಮೆರಿಕ ನೀಡಿರುವ ಕರೆ ಬಗ್ಗೆ ಉಕ್ರೇನ್ ಟೀಕೆಗಳನ್ನು ಉದ್ದೇಶಿಸಿದ ಬೈಡನ್, ರಾಯಭಾರ ಕಚೇರಿಯು ‘ಸಂಪೂರ್ಣವಾಗಿ ತೆರೆದಿರಲಿದ್ದು, ಕಾರ್ಯನಿರ್ವಹಿಸಲಿದೆ’ಎಂದು ಭರವಸೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ, ಅಮೆರಿಕ ಅಧ್ಯಕ್ಷರು ದೀರ್ಘ ಫೋನ್ ಸಂಭಾಷಣೆಯನ್ನು ನಡೆಸಿದರು. ಅವರು ಉತ್ಕರ್ಷದ ಇತ್ತೀಚಿನ ರಾಜತಾಂತ್ರಿಕ ಪ್ರಯತ್ನಗಳನ್ನು ಚರ್ಚಿಸಿದ್ದಾರೆ ಮತ್ತು ಭವಿಷ್ಯಕ್ಕಾಗಿ ಜಂಟಿ ಕ್ರಮಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದ ಬೆಂಬಲಕ್ಕಾಗಿ ಬೈಡನ್‌ಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಉಕ್ರೇನ್‌ಗೆ ಹಣಕಾಸಿನ ನೆರವು ನೀಡುವ ಸಾಧ್ಯತೆಗಳನ್ನು ಸಹ ಬೈಡನ್ ಜೊತೆಗಿನ ಆತುಕತೆ ವೇಳೆ ಚರ್ಚಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.