ಜಪಾನ್‌ನ ಟೊಕಿಯೊದಿಂದ ಸೆಂಡೈವರೆಗೆ ಬುಲೆಟ್ ರೈಲಿನಲ್ಲಿ ಶಿಗೆರು ಇಶಿಬಾ ಮತ್ತು ನರೇಂದ್ರ ಮೋದಿ
ಎಕ್ಸ್ ಚಿತ್ರ
ಟೊಕಿಯೊ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ಟೊಕಿಯೊದಿಂದ ಸೆಂಡೈವರೆಗೆ ಬುಲೆಟ್ ರೈಲಿನಲ್ಲಿ ಇಂದು (ಶನಿವಾರ) ಪ್ರಯಾಣಿಸಿದ್ದಾರೆ.
ಒಟ್ಟು 370 ಕಿ.ಮೀ. ದೂರವಿರುವ ಈ ಮಾರ್ಗದಲ್ಲಿ ಸಂಚರಿಸಿದ ಚಿತ್ರಗಳನ್ನು ಇಬ್ಬರೂ ನಾಯಕರು ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಂಡೈಗೆ ಪ್ರಯಾಣ. ಅವರೊಂದಿಗೆ ನಾನು ರೈಲಿನ ಬೋಗಿಯೊಳಗೆ ಕುಳಿತಿದ್ದೇನೆ’ ಎಂದು ಪ್ರಧಾನಿ ಇಶಿಬಾ ಹೇಳಿದ್ದಾರೆ.
ಸೆಂಡೈಗೆ ಬಂದಿಳಿದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪೂರ್ವ ಜಪಾನ್ ರೈಲ್ವೆ ಕಂಪನಿಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಲೊಕೊ ಪೈಲೆಟ್‌ಗಳನ್ನು ಉಭಯ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಹೊಸ ಮಾದರಿಯ ಆಲ್ಫಾ–ಎಕ್ಸ್ ರೈಲು ಮತ್ತು ಬುಲೆಟ್ ರೈಲುಗಳ ಮಾಹಿತಿಯನ್ನು ಕಂಪನಿಯ ಅಧ್ಯಕ್ಷ ನಾಯಕರಿಗೆ ವಿವರಿಸಿದರು.
ಭಾರತ–ಜಪಾನ್ 15ನೇ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಸೆಂಡೈನ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿರುವ ಅವರು ಅಲ್ಲಿನ ಸೆಮಿಕಂಡಕ್ಟರ್ ಘಟಕ ಮತ್ತು ಬುಲೆಟ್ ರೈಲುಗಳ ಕೋಚ್ ಕಾರ್ಖಾನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ, ಅಪರೂಪದ ಖನಿಜಗಳು ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿನ ಆರ್ಥಿಕ ಭದ್ರತೆಯಲ್ಲಿ ಭಾರತ ಮತ್ತು ಜಪಾನ್ ಜತೆಗೂಡಿ ಕೆಲಸ ಮಾಡುತ್ತಿದ್ದು, ಮೋದಿ ಅವರು ಈ ಕ್ಷೇತ್ರಗಳ ಘಟಕಗಳಿಗೆ ಭೇಟಿ ನೀಡಿದ್ದಾರೆ.
‘ಭಾರತ–ಜಪಾನ್ ಮುಂದಿನ ದಶಕಕ್ಕೆ ಜಂಟಿ ಯೋಜನೆಗಾಗಿ ಎಂಟು ಮಾರ್ಗಗಳು’ ಎಂಬ ಶೀರ್ಷಿಕೆಯಡಿ ದೆಹಲಿ ಮತ್ತು ಟೊಕಿಯೊ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ. ಚಂದ್ರಯಾನ–5 ಯೋಜನೆಯಲ್ಲಿ ಜಂಟಿ ಅನ್ವೇಷಣೆಗೆ ಜಪಾನ್ ಮತ್ತು ಭಾರತ ಒಡಂಬಡಿಕೆಗೆ ಸಹಿ ಹಾಕಿವೆ.
ಶನಿವಾರ ಸಂಜೆಯ ಹೊತ್ತಿಗೆ ಪ್ರಧಾನಿ ಮೋದಿ ಅವರು ಚೀನಾಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.