ADVERTISEMENT

ಕಾಂಬೋಡಿಯಾ–ಥಾಯ್ಲೆಂಡ್ ಗಡಿ ಸಂಘರ್ಷ: 30 ಅಡಿ ಎತ್ತರದ ವಿಷ್ಣು ಪ್ರತಿಮೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:16 IST
Last Updated 25 ಡಿಸೆಂಬರ್ 2025, 6:16 IST
<div class="paragraphs"><p>ವಿಷ್ಣು ಪ್ರತಿಮೆ ಧ್ವಂಸ</p></div>

ವಿಷ್ಣು ಪ್ರತಿಮೆ ಧ್ವಂಸ

   

ಸುರಿನ್‌( ಕಾಂಬೋಡಿಯಾ): ಕಾಂಬೋಡಿಯಾ–ಥಾಯ್ಲೆಂಡ್ ಗಡಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು ಗಡಿಯಲ್ಲಿರುವ ವಿವಾದಿತ ಪ್ರದೇಶದಲ್ಲಿದ್ದ 30 ಅಡಿ ಎತ್ತರದ ವಿಷ್ಣು ಪ್ರತಿಮೆಯನ್ನು ಥಾಯ್ಲೆಂಡ್ ಸೇನೆ ಧ್ವಂಸ ಮಾಡಿದೆ ಎಂದು ಕಾಂಬೋಡಿಯಾ ಆರೋಪಿಸಿದೆ.

ಉಭಯ ದೇಶಗಳ ಮಧ್ಯೆ ಗಡಿ ಸಂಘರ್ಷ ಕಳೆದ ಎರಡು ವಾರಗಳಿಂದ ಮತ್ತಷ್ಟು ತೀವ್ರಗೊಂಡಿದ್ದು ಎರಡು ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಥಾಯ್‌ ಸೇನೆ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದೆ ಎಂದು ಆರೋಪಿಸಿರುವ ಕಾಂಬೋಡಿಯಾ, ಥಾಯ್ಲೆಂಡ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದೆ.

ADVERTISEMENT

2014ರಲ್ಲಿ ನಮ್ಮ ಗಡಿ ಪ್ರದೇಶದಲ್ಲಿರುವ ಪ್ರೇಮ್‌ ವಿಹಾರ್ ಪ್ರಾಂತ್ಯದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಗಡಿ ರೇಖೆಯಿಂದ 400 ಮೀಟರ್‌ ದೂರದಲ್ಲಿತ್ತು. ಎರಡು ದಿನಗಳ ಹಿಂದೆ ಈ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ಕಾಂಬೋಡಿಯಾ ವಕ್ತಾರ ಕಿಮ್ ಚಾನ್‌ಪನ್ನಾ ಹೇಳಿದ್ದಾರೆ.

ಬೌದ್ಧ ಮತ್ತು ಹಿಂದೂ ಧರ್ಮದ ಭಕ್ತರು ಪೂಜಿಸುವ ಪುರಾತನ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಧ್ವಂಸ ಮಾಡಿರುವುದನ್ನು ನಾವು  ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಥಾಯ್ಲೆಂಡ್ ಸೇನೆಯ ವಕ್ತಾರರು ನಿರಾಕರಿಸಿದ್ದಾರೆ. 

ಹಲವು ದಶಕಗಳಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ನಡೆಯುತ್ತಿದೆ. ಈ ತಿಂಗಳಲ್ಲಿ ಘರ್ಷಣೆ ತೀವ್ರಗೊಂಡಿದ್ದು ಯುದ್ಧದ ಆತಂಕ ನಿರ್ಮಾಣವಾಗಿದೆ. ಗಡಿಯಲ್ಲಿದ್ದ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಘರ್ಷಣೆಯಲ್ಲಿ 40 ಜನರು ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.