
ಜೊಹಾನಸ್‌ಬರ್ಗ್: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಸ್ವೀಕರಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಭಾರತಕ್ಕೆ ಭೇಟಿ ನೀಡಲು ಒಪ್ಪಿಕೊಂಡಿದ್ದಾರೆ.
‘ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ ಭಾನುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮೋದಿ ಅವರು ನೀಡಿದ ಆಹ್ವಾನವನ್ನು ಒಪ್ಪಿಕೊಂಡಿರುವ ಕಾರ್ನಿ ಅವರು 2026ರ ಆರಂಭದಲ್ಲಿ ಭೇಟಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಕೆನಡಾ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
‘ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಪಡಿಸುವುದರ ಜೊತೆಗೆ ರಕ್ಷಣೆ ಮತ್ತು ಬಾಹ್ಯಾಕಾಶ ವಲಯದಲ್ಲೂ ಸಹಕಾರವನ್ನು ಬಲಪಡಿಸಿಕೊಳ್ಳಲು ಮೋದಿ ಮತ್ತು ಕಾರ್ನಿ ಸಮ್ಮತಿಸಿದ್ದಾರೆ. ಸಮಗ್ರ ಆರ್ಥಿಕ ಪಾಲುದಾರಿಕೆಯ ಒಪ್ಪಂದದ(ಸಿಇಪಿಎ) ಬಗ್ಗೆಯೂ ಮಾತುಕತೆ ಆರಂಭಿಸಲು ಉಭಯ ನಾಯಕರು ನಿರ್ಧರಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ಕಾನೂನು ಜಾರಿಗೆ ಸಂಬಂಧಿಸಿ ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿನ ಪ್ರಗತಿಯ ಬಗ್ಗೆ ಕಾರ್ನಿ ಹರ್ಷ ವ್ಯಕ್ತಪಡಿಸಿದರು.
ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು 2023ರಲ್ಲಿ ಕೆನಡಾದ ಆಗಿನ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಆರೋಪಿಸಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧ ತೀವ್ರ ಹದಗೆಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.