ADVERTISEMENT

ಕೆನಡಾ: ಭೀಕರ ಚಳಿಗೆ ಸಿಲುಕಿ ನಾಲ್ವರು ಭಾರತೀಯರ ಸಾವು, ಗುರುತು ಪತ್ತೆ

ಪಿಟಿಐ
Published 28 ಜನವರಿ 2022, 3:09 IST
Last Updated 28 ಜನವರಿ 2022, 3:09 IST
ಕೆನಡಾ: ಎಎಫ್‌ಪಿ ಚಿತ್ರ
ಕೆನಡಾ: ಎಎಫ್‌ಪಿ ಚಿತ್ರ   

ಟೊರೊಂಟೊ: ಜನವರಿ 19 ರಂದು ಕೆನಡಾ-ಅಮೆರಿಕ ಗಡಿಯ ಬಳಿಯ ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಶಿಶು ಸೇರಿದಂತೆ ನಾಲ್ವರು ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದ್ದು, ಅವರೆಲ್ಲರೂ ಭಾರತೀಯರು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಇಲ್ಲಿನ ಭಾರತದ ಹೈಕಮಿಷನ್ ತಿಳಿಸಿದೆ.

ಕೆನಡಾದ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಮೃತರನ್ನು ಜಗದೀಶ್ ಬಲದೇವ್‌ಭಾಯ್ ಪಟೇಲ್ (39), ವೈಶಾಲಿಬೆನ್ ಜಗದೀಶ್‌ಕುಮಾರ್ ಪಟೇಲ್ (37), ವಿಹಂಗಿ ಜಗದೀಶ್‌ಕುಮಾರ್ ಪಟೇಲ್ (11), ಧಾರ್ಮಿಕ್ ಜಗದೀಶ್‌ಕುಮಾರ್ ಪಟೇಲ್ (3) ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

‘ಜನವರಿ 19, 2022 ರಂದು ಕೆನಡಾ-ಅಮೆರಿಕ ಗಡಿ ಮ್ಯಾನಿಟೋಬಾದ ಬಳಿ ತೀವ್ರ ಚಳಿಯಿಂದ ಹೆ‍ಪ್ಪುಗಟ್ಟಿ ಮೃತಪಟ್ಟ ಶಿಶು ಸೇರಿದಂತೆ ನಾಲ್ಕು ಶವಗಳು ಪತ್ತೆಯಾಗಿದ್ದವು. ಇದೀಗ, ಕೆನಡಾದ ಅಧಿಕಾರಿಗಳು ನಾಲ್ವರ ಗುರುತುಗಳನ್ನು ದೃಢಪಡಿಸಿದ್ದಾರೆ. ನಾಲ್ವರೂ ಭಾರತೀಯ ಪ್ರಜೆಗಳಾಗಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ’ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಭಾರತದ ಹೈಕಮಿಷನ್‌ನ ಅಧಿಕಾರಿಗಳು ಮೃತರ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದು, ಬೇಕಾದ ನೆರವನ್ನು ಒದಗಿಸುತ್ತಿದ್ದಾರೆ.

ಜನವರಿ 19 ರಂದು, ಮ್ಯಾನಿಟೋಬಾ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು (ಆರ್‌ಸಿಎಂಪಿ) ಇಬ್ಬರು ವಯಸ್ಕರು, ಹದಿಹರೆಯದವರು ಮತ್ತು ಶಿಶುಗಳು ಸೇರಿ ನಾಲ್ಕು ಜನರ ಶವಗಳು ದಕ್ಷಿಣ ಕೇಂದ್ರ ಮ್ಯಾನಿಟೋಬಾದ ಎಮರ್ಸನ್ ಪ್ರದೇಶದ ಬಳಿಯ ಅಮೆರಿಕ / ಕೆನಡಾ ಗಡಿಯ ಕೆನಡಾದ ಭಾಗದಲ್ಲಿ ಕಂಡುಬಂದಿವೆ ಎಂದು ಹೇಳಿದ್ದರು.

ಗುಜರಾತ್ ಅಪರಾಧ ತನಿಖಾ ಇಲಾಖೆಯು ಮೃತ ಕುಟುಂಬದ ಸದಸ್ಯರು ಸ್ಥಳೀಯ ಏಜೆಂಟರ ಸಹಾಯವನ್ನು ಪಡೆದಿದ್ದಾರೆಯೇ ಎಂದು ತನಿಖೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವೈದ್ಯಕೀಯ ಪರೀಕ್ಷೆಯ ನಂತರ, ನಾಲ್ವರೂ ಹೊರಗಿನ ಭೀಕರ ಚಳಿಗೆ ಒಡ್ಡಿಕೊಂಡಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಕೆನಡಾ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಇಂಡಿಯನ್ ಹೈಕಮೀಷನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.