ADVERTISEMENT

ಡೊನಾಲ್ಡ್‌ ಟ್ರಂಪ್‌ ಆಪ್ತ ಚಾರ್ಲಿ ಕಿರ್ಕ್‌ ಕೊಲೆ: ಇನ್ನೂ ಪತ್ತೆಯಾಗದ ಹಂತಕ

ರಾಯಿಟರ್ಸ್
Published 12 ಸೆಪ್ಟೆಂಬರ್ 2025, 12:30 IST
Last Updated 12 ಸೆಪ್ಟೆಂಬರ್ 2025, 12:30 IST
ಚಾರ್ಲಿ ಕಿರ್ಕ್‌
ಚಾರ್ಲಿ ಕಿರ್ಕ್‌   

ಒರೆಮ್‌, ಉತಾಹ್‌: ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಪ್ತ ಚಾರ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಹಂತಕ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ತನಿಖಾಧಿಕಾರಿಗಳು ಶುಕ್ರವಾರವೂ ವ್ಯಾಪಕ ಶೋಧ ನಡೆಸಿದರು.

ಘಟನಾ ಸ್ಥಳದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತ ವ್ಯಕ್ತಿಯ ವಿಡಿಯೊ ಹಾಗೂ ಫೋಟೊಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಹಂತಕನ ಪತ್ತೆ ಕಾರ್ಯದಲ್ಲಿ ತನಿಖಾಧಿಕಾರಿಗಳು ಪ್ರಗತಿ ಸಾಧಿಸಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಉತಾಹ್ ರಾಜ್ಯಪಾಲ ಸ್ಪೆನ್ಸರ್‌ ಕಾಕ್ಸ್‌ ಹಾಗೂ ಎಫ್‌ಬಿಐ ನಿರ್ದೇಶಕ ಕಾಶ್‌ ಪಟೇಲ್‌, ‘ಕಿರ್ಕ್‌ ಅವರನ್ನು ಕೊಂದ ಯುವಕನನ್ನು ಪತ್ತೆ ಮಾಡಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ಕೊಲೆಗಾರನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಡಾಲರ್‌ ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿದೆ.

ಒರೆಮ್‌ ನಗರದ ಉತಾಹ್‌ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ‘ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್‌’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 3 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಟೆಂಟ್ ರೀತಿಯ ವೇದಿಕೆಯಲ್ಲಿ ಕೂತ್ತಿದ್ದ ಚಾರ್ಲಿ ಕಿರ್ಕ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದರು. ಮಧ್ಯಾಹ್ನ 12.20ರ ವೇಳೆ ಅವರು ಅಮೆರಿಕದಲ್ಲಿ ಮಾಸ್ ಶೂಟಿಂಗ್ ಬಗ್ಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಆಗ ಕಟ್ಟಡದ ಚಾವಣಿಯಿಂದ ಕಿರ್ಕ್‌ ಕಡೆಗೆ ಗುಂಡು ಹಾರಿದ್ದು, ಕಿರ್ಕ್‌ ಅವರ ಕುತ್ತಿಗೆ ಭಾಗಕ್ಕೆ ತಗುಲಿ ತೀವ್ರ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಅಸುನೀಗಿದ್ದರು.

‌31 ವರ್ಷದ ಕಿರ್ಕ್, ಅಮೆರಿಕದ ಅತ್ಯಂತ ಪ್ರಮುಖ ಬಲಪಂಥೀಯ ಯುವ ಸಂಘಟನೆ ‘ಟರ್ನಿಂಗ್ ಪಾಯಿಂಟ್‌’ನ ಸ್ಥಾಪಕರಾಗಿದ್ದರು. ಬಲಪಂಥೀಯ ವಿಚಾರಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಪರ ಯುವ ಅಲೆ ಎದ್ದೇಳಲು ಕಿರ್ಕ್ ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.