ADVERTISEMENT

ಮಿಲಿಟರಿ ಸಿಬ್ಬಂದಿ ಅವಹೇಳನ ನಿಷೇಧಿಸುವ ಮಸೂದೆಗೆ ಚೀನಾ ಅಸ್ತು

ಪಿಟಿಐ
Published 11 ಜೂನ್ 2021, 9:38 IST
Last Updated 11 ಜೂನ್ 2021, 9:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಮಿಲಿಟರಿ ಸಿಬ್ಬಂದಿಯನ್ನು ಅವಮಾನಿಸುವುದನ್ನು ನಿಷೇಧಿಸುವ ಮಸೂದೆಗೆ ಚೀನಾ ಅನುಮೋದನೆ ನೀಡಿದೆ.

ಚೀನಾದ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ (ಎನ್‌ಪಿಸಿ) ಸ್ಥಾಯಿ ಸಮಿತಿ ಮಂಡಿಸಿದ ಈ ಮಸೂದೆಗೆ ಅನುಮೋದನೆ ನೀಡಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಯಾವುದೇ ರೀತಿಯಲ್ಲಿ ಮಿಲಿಟರಿ ಸಿಬ್ಬಂದಿಯನ್ನು ಅವಮಾನಿಸುವುದನ್ನು, ಅವರ ಗೌರವಕ್ಕೆ ಧಕ್ಕೆ ತರುವುದನ್ನು ಈ ಮಸೂದೆ ನಿಷೇಧಿಸುತ್ತದೆ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.

ಮಿಲಿಟರಿ ಸಿಬ್ಬಂದಿಗೆ ಗೌರವಾರ್ಥವಾಗಿ ನೀಡಿರುವ ಪದಕಗಳನ್ನು ಅವಮಾನಿಸುವುದನ್ನು ಸಹ ಹೊಸ ಮಸೂದೆ ನಿಷೇಧಿಸುತ್ತದೆ.

ADVERTISEMENT

ಈಗಾಗಲೇ ಜಾರಿಯಲ್ಲಿದ್ದ ಕಾಯ್ದೆಯನ್ನು ಈ ಮಸೂದೆ ಮೂಲಕ ಮತ್ತಷ್ಟು ಕಠಿಣಗೊಳಿಸಲಾಗಿದೆ.

ಪೂರ್ವ ಲಡಾಖ್‌ನ ಗಡಿಯಲ್ಲಿರುವ ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ, ಭಾರತದ ಯೋಧರು ಚೀನಾದ ಸೈನಿಕರನ್ನು ಹತ್ಯೆ ಮಾಡಿದ್ದರು. ಇದನ್ನು ಮೊದಲು ಒಪ್ಪದಿದ್ದ ಚೀನಾ, ನಂತರ ತನ್ನ ನಾಲ್ವರು ಸೈನಿಕರು ಹತ್ಯೆಯಾಗಿದ್ದಾರೆ ಎಂದಿತ್ತು. ಈ ಬಗ್ಗೆ ಚೀನಾದ ಖ್ಯಾತ ಬ್ಲಾಗರ್‌ವೊಬ್ಬರು ಬರೆದಿದ್ದ ಲೇಖನ ಸೈನಿಕರನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದ ಕಮ್ಯುನಿಸ್ಟ್‌ ಸರ್ಕಾರ, ಬ್ಲಾಗರ್‌ಗೆ ಶಿಕ್ಷೆ ವಿಧಿಸಿತ್ತು.

ಸೇನಾಪಡೆಗಳ ಸಿಬ್ಬಂದಿಗೆ ಅವಮಾನಿಸಲಾಗಿದೆ ಎಂಬುದು ಕಂಡುಬಂದಾಗ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.