ADVERTISEMENT

ಅಗತ್ಯ ವಸ್ತು ಸಂಗ್ರಹಿಸಲು ಜನರಿಗೆ ಚೀನಾ ಸಲಹೆ: ಯುದ್ಧದ ಊಹಾಪೋಹ ಉದ್ಭವ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 14:46 IST
Last Updated 4 ನವೆಂಬರ್ 2021, 14:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್ (ಎಪಿ): ದೈನಂದಿನ ಜೀವನ ಮತ್ತು ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಜನರಿಗೆ ಚೀನಾ ಸರ್ಕಾರವೇ ಶಿಫಾರಸು ಮಾಡಿದ್ದು, ಜನರು ಆತಂಕದಲ್ಲಿ ಮುಗಿಬಿದ್ದು ಅಗತ್ಯವಸ್ತುಗಳನ್ನು ಖರೀದಿಸುತ್ತಿದ್ದಾರೆ. ಅಲ್ಲದೇ ಚೀನಾ ತೈವಾನ್‌ನೊಂದಿಗೆ ಯುದ್ಧ ನಡೆಸಲು ಮುಂದಾಗಿದೆಯಾ? ಎನ್ನುವ ಊಹಾಪೋಹ ಮತ್ತು ಪ್ರಶ್ನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟುಹಾಕಿದೆ.

ಬಹುಶಃ ಮಿಲಿಟರಿ ಹಗೆತನವು ಸನ್ನಿಹಿತವಾಗಿಲ್ಲ ಎಂದು ಹೆಚ್ಚಿನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಜನರ ಮನಸ್ಸಿನಲ್ಲಿ ಅಂತಹ ಅಭಿಪ್ರಾಯ ಇರುವುದನ್ನು ಮತ್ತು ಯುದ್ಧೋತ್ಸಾಹದ ಹೇಳಿಕೆಗಳನ್ನು ಹೊರಹಾಕಿವೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ‘ಯುದ್ಧದ ಭಯವೋ ಅಥವಾ ಇಲ್ಲವೋ, ಚೀನಾದ ಕೆಲವು ನಗರಗಳಲ್ಲಿ ಅಕ್ಕಿ, ನೂಡಲ್ಸ್ ಮತ್ತು ಅಡುಗೆ ಎಣ್ಣೆಯನ್ನು ಜನರು ಮುಗಿಬಿದ್ದು ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿವೆ. ಕೋವಿಡ್‌–19 ಏಕಾಏಕಿ ಹಲವಾರು ಪ್ರಾಂತ್ಯಗಳಲ್ಲಿ ಹರಡುತ್ತಿರುವುದರಿಂದ ನೆರೆಹೊರೆಯಲ್ಲಿ ಲಾಕ್‌ಡೌನ್‌ಗಳ ಸಾಧ್ಯತೆಯು ಕೆಲವರಿಗೆ ತಕ್ಷಣಕ್ಕೆಹೆಚ್ಚು ಚಿಂತೆಯಾಗಿದೆ’.

ADVERTISEMENT

‘ನನಗೆ ಭಯವಿಲ್ಲ. ಆದರೆ, ನಾವು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಸ್ಥಳೀಯ ನಿವಾಸಿ ಹು ಚುನ್ಮೆಯ್ ತಿಳಿಸಿದ್ದಾರೆ.

ತೈವಾನ್ 2.4 ಕೋಟಿ ಜನಸಂಖ್ಯೆಯ ಸ್ವ-ಆಡಳಿತ ದ್ವೀಪವಾಗಿದೆ. ಚೀನಾ ಇದನ್ನು ತನ್ನ ಆಳ್ವಿಕೆಯಡಿ ಇರಬೇಕಾದ ಪ್ರಾಂತ್ಯವೆಂದು ಪರಿಗಣಿಸಿದ್ದು, ಇಲ್ಲಿನ ಜನರನ್ನು ದಂಗೆಕೋರರೆಂದು ಭಾವಿಸಿದೆ. ಈ ದ್ವೀಪ ರಾಷ್ಟ್ರದಲ್ಲಿ ಇತ್ತೀಚಿಗೆ ಉದ್ವಿಗ್ನತೆ ತೀವ್ರವಾಗಿ ಏರಿದೆ. ಚೀನಾವು ದ್ವೀಪದ ಸಮೀಪಕ್ಕೆ ಹೆಚ್ಚು ಯುದ್ಧವಿಮಾನಗಳನ್ನು ಕಳುಹಿಸುತ್ತಿದೆ. ಅಮೆರಿಕ ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದು, ಅಲ್ಲಿನ ಸರ್ಕಾರದೊಂದಿಗೆ ಗಾಢ ಸಂಬಂಧಗಳನ್ನು ಬೆಸೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.