ADVERTISEMENT

ಭಾರತ–ಅಮೆರಿಕದ ಸಂಬಂಧ ಗಾಢವಾಗುವುದನ್ನು ತಡೆಯಲು ಚೀನಾ ಯತ್ನ: ವರದಿ

ಪಿಟಿಐ
Published 24 ಡಿಸೆಂಬರ್ 2025, 14:05 IST
Last Updated 24 ಡಿಸೆಂಬರ್ 2025, 14:05 IST
   

ನವದೆಹಲಿ: ವಾಸ್ತವ ಗಡಿರೇಖೆಯಲ್ಲಿ ಕಡಿಮೆ ಆಗಿರುವ ಉದ್ವಿಗ್ನತೆಯ ಲಾಭ ಪಡೆದು, ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಸಿಕೊಳ್ಳುವ ಮೂಲಕ ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಾಢಗೊಳ್ಳುವುದನ್ನು ತಡೆಯಲು ಚೀನಾ ಯೋಜಿಸಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವರದಿ ತಿಳಿಸಿದೆ. ಅಮೆರಿಕ ಸಂಸತ್ತಿಗೆ ಸಲ್ಲಿಸಿದ ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಿದೆ.

ಎಲ್‌ಎಸಿಯಲ್ಲಿ ಸೇನೆ ಹಿಂತೆಗೆತ ಮತ್ತು ಪ್ರಕ್ಷುಬ್ಧತೆ ಶಮನ ಕುರಿತಂತೆ 2024ರಲ್ಲಿ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ಜಿನ್‌ಪಿಂಗ್ ಒಪ್ಪಂದ ಘೋಷಿಸಿದ್ದರು.

ಷಿ-ಮೋದಿ ಸಭೆಯು ಎರಡೂ ದೇಶಗಳ ನಡುವೆ ಮಾಸಿಕ ಉನ್ನತ ಮಟ್ಟದ ಸಭೆಗೆ ಮುನ್ನುಡಿ ಬರೆದಿತ್ತು. ಎರಡೂ ಕಡೆಯ ಸೇನೆಗಳಿಂದ ಗಡಿ ನಿರ್ವಹಣೆ, ನೇರ ವಿಮಾನಗಳು, ವೀಸಾ ಸೌಲಭ್ಯ ಮತ್ತು ಶಿಕ್ಷಣ ತಜ್ಞರು ಮತ್ತು ಪತ್ರಕರ್ತರ ವಿನಿಮಯ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಮುಂದಿನ ಹಂತದ ಪ್ರಕ್ರಿಯೆಗಳು ನಡೆದವು ಎಂದು ಅದು ಹೇಳಿದೆ.

ADVERTISEMENT

‘ಚೀನಾ ಬಹುಶಃ ಎಲ್‌ಎಸಿಯ ಉದ್ದಕ್ಕೂ ಕಡಿಮೆಯಾದ ಉದ್ವಿಗ್ನತೆಯ ಲಾಭ ಮಾಡಿಕೊಳ್ಳಲು ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸುವ ಮೂಲಕ ಅಮೆರಿಕ-ಭಾರತದ ನಡುವಿನ ಸಂಬಂಧಗಳು ಆಳವಾಗುವುದನ್ನು ತಡೆಯಲು ಪ್ರಯತ್ನಿಸುತ್ತದೆ. ಆದರೂ, ಭಾರತವು ಬಹುಶಃ ಚೀನಾದ ಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ಸಂಶಯ ಹೊಂದಿರಬಹುದು. ನಿರಂತರ ಪರಸ್ಪರ ಅಪನಂಬಿಕೆ ಮತ್ತು ಇತರ ಉದ್ವಿಗ್ನತೆಗಳು ದ್ವಿಪಕ್ಷೀಯ ಸಂಬಂಧವನ್ನು ಬಹುತೇಕ ಮಿತಿಗೊಳಿಸುತ್ತವೆ’ಎಂದು ವರದಿ ಹೇಳಿದೆ.

2049ರ ವೇಳೆಗೆ ರಾಷ್ಟ್ರದ ಮಹಾ ಪುನಶ್ಚೇತನ ಸಾಧಿಸುವುದು ಅದರ ರಾಷ್ಟ್ರೀಯ ಕಾರ್ಯತಂತ್ರವಾಗಿದೆ ಎಂದು ಅದು ಒತ್ತಿ ಹೇಳಿದೆ.

ಚೀನಾದ ಈ ದೃಷ್ಟಿಕೋನವು ವಿಶ್ವದಲ್ಲಿ ಅದರ ಪ್ರಭಾವ, ಶಕ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದೂ ನಂಬಲಾಗಿದೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣ ಹೆಚ್ಚಳ, ಆರ್ಥಿಕ ಬೆಳವಣಿಗೆಯ ಉತ್ತೇಜನ ಮತ್ತು ಚೀನಾದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ವಿಸ್ತರಿಸುವ ಗುರಿಯನ್ನು ಈ ದೃಷ್ಟಿಕೋನ ಒಳಗೊಂಡಿದೆ.

ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪಗಳು ಮತ್ತು ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿನ ಪ್ರಾದೇಶಿಕ ವಿವಾದಗಳ ಮಧ್ಯೆ, ತೈವಾನ್ ಮೇಲೆ ಸಾರ್ವಭೌಮತ್ವದ ಹಕ್ಕುಗಳನ್ನು ಸಾಧಿಸುವ ಪ್ರಮುಖ ಉದ್ದೇಶವನ್ನು ಚೀನಾ ನಾಯಕತ್ವ ಹೊಂದಿದೆ ಎಂದೂ ಅದು ಹೇಳಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ, ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧಗಳು ಮತ್ತಷ್ಟು ಬಲಿಷ್ಠಗೊಂಡಿವೆ. ರಕ್ಷಣಾ ಇಲಾಖೆ ಈ ಪ್ರಗತಿಯ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ವರದಿ ಹೇಳಿದೆ.

‘ನಾವು ಪಿಎಲ್‌ಎಯೊಂದಿಗೆ(ಪೀಪಲ್ಸ್ ಲಿಬರೇಶನ್ ಆರ್ಮಿ) ವ್ಯಾಪಕ ಶ್ರೇಣಿಯ ಮಿಲಿಟರಿ ಟು ಮಿಲಿಟರಿ ಸಂವಹನಗಳನ್ನು ಆರಂಭಿಸುವ ಮೂಲಕ ಸಂಬಂಧ ಉತ್ತಮಗೊಳಿಸುವ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ಕಾರ್ಯತಂತ್ರದ ಸ್ಥಿರತೆ ಮತ್ತು ಸಂಘರ್ಷ ನಿವಾರಣೆ ಹಾಗೂ ಉಲ್ಬಣಗೊಳ್ಳುವಿಕೆಯ ಮೇಲೆ ಹೆಚ್ಚು ಗಮನಹರಿಸುತ್ತೇವೆ. ನಮ್ಮ ಶಾಂತಿಯುತ ಉದ್ದೇಶಗಳನ್ನು ಸ್ಪಷ್ಟಪಡಿಸಲು ನಾವು ಇತರ ಮಾರ್ಗಗಳನ್ನು ಸಹ ಹುಡುಕುತ್ತೇವೆ’ಎಂದೂ ಅದು ಹೇಳಿದೆ.

ಇಂಡೊ-ಪೆಸಿಫಿಕ್‌ನಲ್ಲಿ ಅಮೆರಿಕದ ಹಿತಾಸಕ್ತಿಗಳು ಮೂಲಭೂತ ಮತ್ತು ಸಮಂಜಸವಾಗಿದೆ ಎಂದು ವರದಿ ಒತ್ತಿ ಹೇಳಿದೆ.

'ನಾವು ಚೀನಾವನ್ನು ನಿಗ್ರಹಿಸಲು, ಪ್ರಾಬಲ್ಯ ಸಾಧಿಸಲು ಅಥವಾ ಅವಮಾನಿಸಲು ಪ್ರಯತ್ನಿಸುವುದಿಲ್ಲ. ಬದಲಿಗೆ, ಅಧ್ಯಕ್ಷ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಹೇಳಿರುವಂತೆ, ಇಂಡೊ-ಪೆಸಿಫಿಕ್‌ನಲ್ಲಿರುವ ಯಾವುದೇ ದೇಶವು ನಮ್ಮ ಮೇಲೆ ಅಥವಾ ನಮ್ಮ ಮಿತ್ರರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ನಿರಾಕರಿಸಲು ಮಾತ್ರ ನಾವು ಪ್ರಯತ್ನಿಸುತ್ತೇವೆ. ಅಂದರೆ, ಆಕ್ರಮಣಶೀಲತೆಯನ್ನು ಸಹ ಪರಿಗಣಿಸಲಾಗುವುದಿಲ್ಲ. ಶಾಂತಿಗೆ ಆದ್ಯತೆ ನೀಡಲಾಗುತ್ತದೆ’ಎಂದು ಅದು ಹೇಳಿದೆ.

‘ಅಧ್ಯಕ್ಷ ಟ್ರಂಪ್ ಚೀನಾದೊಂದಿಗೆ ಸ್ಥಿರ, ಶಾಂತಿ, ನ್ಯಾಯಯುತ ವ್ಯಾಪಾರ ಮತ್ತು ಗೌರವಾನ್ವಿತ ಸಂಬಂಧಗಳನ್ನು ಬಯಸುತ್ತಾರೆ. ಮಿಲಿಟರಿ ಬಲದಿಂದ ಈ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಯುದ್ಧ ಇಲಾಖೆಯು ಖಚಿತಪಡಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಇಂಡೊ-ಪೆಸಿಫಿಕ್‌ನಲ್ಲಿ ನಾವೆಲ್ಲರೂ ಶಾಂತಿ ಸ್ಥಾಪಿಸಲು ಅನುವು ಮಾಡಿಕೊಡುವ ಶಕ್ತಿಯ ಸಮತೋಲನವನ್ನು ರೂಪಿಸುತ್ತೇವೆ. ಇದರಲ್ಲಿ ವ್ಯಾಪಾರವು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತದೆ. ನಾವೆಲ್ಲರೂ ಸಮೃದ್ಧವಾಗಬಹುದು. ಇದರ ಜೊತೆಗೆ, ಎಲ್ಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಗೌರವಿಸಲಾಗುತ್ತದೆ’ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.