ಬೀಜಿಂಗ್: ಭಾರತದಲ್ಲಿ ಬ್ರಹ್ಮಪುತ್ರ ಮತ್ತು ಟಿಬೆಟ್‌ನಲ್ಲಿ ಯಾರ್ಲಂಗ್ ಸಂಗ್ಪೊ ಎಂಬ ಹೆಸರಿನಲ್ಲಿ ಹರಿಯುವ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಶನಿವಾರ ಚಾಲನೆ ನೀಡಿದೆ.
ಅಣೆಕಟ್ಟು ನಿರ್ಮಿಸಿ ಜಲವಿದ್ಯುತ್ ಉತ್ಪಾದನೆ ಮಾಡುವ ಈ ಯೋಜನೆಯನ್ನು ಚೀನಾದ ಪ್ರಧಾನಿ ಲೀ ಚಿಯಾಂಗ್ ದಕ್ಷಿಣ ಟಿಬೆಟ್‌ನ ನಿಯಾಂಚಿಯಲ್ಲಿ ಉದ್ಘಾಟಿಸಿದರು. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
‘ದೇಶದಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ತಲುಪಲು ಮತ್ತು ಟಿಬೆಟ್ ವಲಯದ ಆರ್ಥಿಕ ಪ್ರಗತಿಯ ಮುನ್ನೋಟದೊಂದಿಗೆ, ಚೀನಾವು ಈ ಯೋಜನೆಗೆ ಕಳೆದ ಡಿಸೆಂಬರ್‌ನಲ್ಲಿ ಅನುಮತಿ ನೀಡಿತ್ತು. ಈ ಯೋಜನೆಯಡಿ ಐದು ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಚೀನಾ 167.1 ಬಿಲಿಯನ್ ಡಾಲರ್ (₹14.39 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.
ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ನದಿಯ ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಚೀನಾ ಇದನ್ನು ಅಲ್ಲಗಳೆದಿದೆ. ನದಿ ಕೆಳಭಾಗದ ಜನರ ಸುರಕ್ಷತೆಗೆ ಯಾವುದೇ ಆತಂಕ ಇಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.