ADVERTISEMENT

ಹೆಚ್ಚುವರಿ ನೀರು ಹೊರಬಿಡಲು ಅಣೆಕಟ್ಟು ಸ್ಫೋಟಿಸಿದ ಚೀನಾ

ಏಜೆನ್ಸೀಸ್
Published 20 ಜುಲೈ 2020, 8:41 IST
Last Updated 20 ಜುಲೈ 2020, 8:41 IST
ಮಧ್ಯ ಚೀನಾದ ಅನ್‌ಹುಯಿಯಲ್ಲಿ ಪ್ರದೇಶದಲ್ಲಿ ಹೆಚ್ಚುವರಿ ನೀರು ಹೊರಬಿಡಲು ಅಣೆಕಟ್ಟೆಯ ಒಂದು ಭಾಗ ಸ್ಫೋಟಿಸಿದಾಗ ಕಂಡುಬಂದ ದೃಶ‍್ಯ
ಮಧ್ಯ ಚೀನಾದ ಅನ್‌ಹುಯಿಯಲ್ಲಿ ಪ್ರದೇಶದಲ್ಲಿ ಹೆಚ್ಚುವರಿ ನೀರು ಹೊರಬಿಡಲು ಅಣೆಕಟ್ಟೆಯ ಒಂದು ಭಾಗ ಸ್ಫೋಟಿಸಿದಾಗ ಕಂಡುಬಂದ ದೃಶ‍್ಯ   

ಬೀಜಿಂಗ್‌: ಹಿನ್ನೀರಿನ ಮಟ್ಟವು ಭಾರಿ ಪ್ರಮಾಣದಲ್ಲಿ ಏರಿಕೆಯಾದ ಕಾರಣ, ನೀರು ಖಾಲಿ ಮಾಡಲು ಇಲ್ಲಿನ ಅಣೆಕಟ್ಟೆಯ ಒಂದು ಭಾಗವನ್ನು ಸ್ಫೋಟಿಸಿದ್ದರಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಮಧ್ಯ ಚೀನಾದ ಅನ್‌ಹುಯಿಯಲ್ಲಿ ಪ್ರದೇಶದ ಚುಹೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯ ಒಂದು ಭಾಗವನ್ನು ಭಾನುವಾರ ಅಧಿಕಾರಿಗಳು ಸ್ಫೋಟಿಸಿದ್ದರು. ಇದರಿಂದ ನೀರಿನ ಸಂಗ್ರಹ ಎರಡು ಅಡಿಗಳಷ್ಟು ಕುಗ್ಗುವ ನಿರೀಕ್ಷೆಯಿದೆ. ಧಾರಾಕಾರ ಮಳೆಯಿಂದಾಗಿ ಚೀನಾದ ಬಹುತೇಕ ಎಲ್ಲ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ.

ಪ್ರವಾಹ ಪರಿಸ್ಥಿತಿ ಎದುರಾದಾಗ ಅಣೆಕಟ್ಟು ಮತ್ತು ಒಡ್ಡುಗಳನ್ನು ಸ್ಫೋಟಿಸುವ ತಂತ್ರವನ್ನು ಚೀನಾ ಕೆಲ ವರ್ಷಗಳಿಂದ ಅನುಸರಿಸುತ್ತಿದೆ. ಇದು ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿದೆ. 1998ರಲ್ಲಿ ಭೀಕರ ಪ್ರವಾಹದ ಸಂದರ್ಭದಲ್ಲಿ ಚೀನಾ ಈ ಕ್ರಮ ಜಾರಿ ಮಾಡಿದ್ದು, 2000ಕ್ಕೂ ಹೆಚ್ಚು ಮಂದಿ ಸತ್ತು, 30 ಲಕ್ಷ ಮನೆಗಳು ನಾಶವಾಗಿದ್ದವು.

ADVERTISEMENT

ಕಳೆದ ವಾರದಲ್ಲಿ ಬೃಹತ್‌ ಅಣೆಕಟ್ಟೆಯೊಂದರ ಹಿನ್ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಸುಮಾರು 15 ಮೀಟರ್‌ನಷ್ಟು ಏರಿಕೆಯಾದ ಕಾರಣಕ್ಕೆ ಅಣೆಕಟ್ಟಿನ ಮೂರು ಗೇಟ್‌ಗಳನ್ನು ತೆರೆಯಲಾಗಿತ್ತು. ಮಂಗಳವಾರ ಮತ್ತೆ ಪ್ರವಾಹ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.