ADVERTISEMENT

ಅಫ್ಗಾನಿಸ್ತಾನ ಬೆಳವಣಿಗೆ: ಚೀನಾದಲ್ಲಿ ಒಂದೆಡೆ ಉತ್ಸಾಹ, ಇನ್ನೊಂದೆಡೆ ಚಿಂತೆ

ಏಜೆನ್ಸೀಸ್
Published 22 ಆಗಸ್ಟ್ 2021, 8:04 IST
Last Updated 22 ಆಗಸ್ಟ್ 2021, 8:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌ (ಎಪಿ): ತನ್ನ ಪ್ರತಿಸ್ಪರ್ಧಿಯಾದ ಅಮೆರಿಕವು ಅಫ್ಗಾನಿಸ್ತಾನದಿಂದ ನಿರ್ಗಮಿಸುತ್ತಿರುವುದು ಚೀನಾದ ಉತ್ಸಾಹವನ್ನು ಒಂದೆಡೆ ಹೆಚ್ಚಿಸಿದೆ. ಇದರಿಂದ ಅಫ್ಗಾನಿಸ್ತಾನದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸುವ ದೀರ್ಘಕಾಲದ ಭರವಸೆಗಳನ್ನು ಅದು ಸಾಕಾರಗೊಳಿಸಲು ಉತ್ಸುಕವಾಗಿದೆ.

ಆದರೆ ತಾಲಿಬಾನಿಗಳ ಆಟಾಟೋಪ, ಅಲ್ಲಿನ ಸರ್ಕಾರದ ಸ್ಥಿರತೆಯ ಪ್ರಶ್ನೆ ಮತ್ತು ಹಿಂಸೆಯ ವಾತಾವರಣವು ಚೀನಾವನ್ನು ಚಿಂತಿಸುವಂತೆ ಮಾಡಿದೆ ಎಂಬುದು ರಾಜಕೀಯ, ಆರ್ಥಿಕ ತಜ್ಞರ ವಿಶ್ಲೇಷಣೆ.

ತಾಲಿಬಾನ್‌ ಸ್ವಾದೀನಕ್ಕೆ ಒಳಗಾಗಿರುವ ಅಫ್ಗಾನಿಸ್ತಾನದಲ್ಲಿನ ಖನಿಜ ಸಂಪತ್ತಿನ ಬಳಕೆ ಸೇರಿದಂತೆ ರಾಜಕೀಯ ಮತ್ತು ಆರ್ಥಿಕ ಅವಕಾಶಗಳು ಚೀನಾಕ್ಕೆ ದೊರೆಯಬಹುದು ಎಂದು ಅದು ನಿರೀಕ್ಷಿಸಿದೆ. ಈ ಕಾರಣದಿಂದ ಈಗಾಗಲೇ ಬೀಜಿಂಗ್‌, ಅಫ್ಗಾನಿಸ್ತಾನದ ಪುನರ್‌ ನಿರ್ಮಾಣಕ್ಕೆ ನೆರವು ನೀಡಲು ಸಿದ್ಧ ಎಂದು ಘೋಷಿಸಿದೆ.

ADVERTISEMENT

ಆದರೆ ವಿಶ್ವದ ಅನೇಕ ರಾಷ್ಟ್ರಗಳಂತೆ ತಾಲಿಬಾನ್ ನೇತೃತ್ವದ ಅಫ್ಗಾನಿಸ್ತಾನದಿಂದ ಎದುರಾಗಬಹುದಾದ ಭಯೋತ್ಪಾದನೆಯ ಅಪಾಯದ ಬಗ್ಗೆ ಚೀನಾ ಕೂಡ ಕಳವಳ ಹೊಂದಿದೆ. ತಾಲಿಬಾನಿನ ಉಗ್ರರಿಗೆ ದಾಳಿಗಳನ್ನು ನಡೆಸಲು ತನ್ನ ಕ್ಸಿನ್‌ಜಿಯಾಂಗ್‌ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಚೀನಾ ಹೇಳಿದೆ.

ತಾಲಿಬಾನ್‌ನ ರಾಜಕೀಯ ನಾಯಕಮುಲ್ಲಾ ಅಬ್ದುಲ್ ಘನಿ ಬರದರ್ ನೇತೃತ್ವದ ನಿಯೋಗ ಕಳೆದ ತಿಂಗಳು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿತ್ತು. ಈ ವೇಳೆ ಚೀನಾವು, ಅಫ್ಗಾನಿಸ್ತಾನದಲ್ಲಿ ಸ್ಥಿರ ಸರ್ಕಾರ ಬಂದು, ಹಿಂಸೆ, ಭಯೋತ್ಪಾದನೆ ಬೆದರಿಕೆಗಳು ಕೊನೆಗೊಂಡರೆ ಅಗತ್ಯ ನೆರವು ನೀಡುವ ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.