ADVERTISEMENT

ರಕ್ಷಣಾ ಬಜೆಟ್ ಹೆಚ್ಚಳ: ಚೀನಾ ಸುಳಿವು ‌

ಇಂದಿನಿಂದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 12:34 IST
Last Updated 4 ಮಾರ್ಚ್ 2023, 12:34 IST
ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್   

ಬೀಜಿಂಗ್‌ (ಪಿಟಿಐ): ‘ಸಂಕೀರ್ಣ ಭದ್ರತಾ ಸವಾಲು’ಗಳನ್ನು ಉಲ್ಲೇಖಿಸಿ ರಕ್ಷಣಾ ಬಜೆಟ್ ಹೆಚ್ಚಿಸುವ ಸುಳಿವನ್ನು ಚೀನಾ ಶನಿವಾರ ನೀಡಿದೆ.

ಚೀನಾದ ಸಂಸತ್‌ ‘ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌’ನ ವಾರ್ಷಿಕ ಅಧಿವೇಶನ ಭಾನುವಾರ ಆರಂಭವಾಗಲಿದೆ. ಇದಕ್ಕೂ ಮುನ್ನ ಶನಿವಾರ, ಸಂಸತ್‌ನ ಉನ್ನತ ಸಲಹಾ ಸಂಸ್ಥೆಯಾದ ‘ಚೀನಾ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್’ (ಸಿಪಿಪಿಸಿಸಿ)ನ ಸಭೆ ನಡೆಯಿತು.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಪಿಸಿಸಿ ವಕ್ತಾರ ವಾಂಗ್ ಚಾವೊ ಅವರು ರಕ್ಷಣಾ ಬಜೆಟ್‌ ಹೆಚ್ಚಳದ ಸುಳಿವು ನೀಡಿದರು.

ADVERTISEMENT

‘ಸಂಕೀರ್ಣ ಭದ್ರತಾ ಸವಾಲುಗಳನ್ನು ಎದುರಿಸಲು ರಕ್ಷಣಾ ಬಜೆಟ್‌ ಹೆಚ್ಚಳದ ಅಗತ್ಯವಿದೆ. ಚೀನಾದ ಮಿಲಿಟರಿ ಆಧುನೀಕರಣವು ಯಾವುದೇ ದೇಶಕ್ಕೆ ಬೆದರಿಕೆ ಒಡ್ಡುವುದಿಲ್ಲ. ಅದು, ಪ್ರಾದೇಶಿಕ ಸ್ಥಿರತೆ ಮತ್ತು ವಿಶ್ವ ಶಾಂತಿಯನ್ನು ರಕ್ಷಿಸುವ ಶಕ್ತಿಯಾಗಲಿದೆ’ ಎಂದರು.

ವಾರಕ್ಕೂ ಹೆಚ್ಚು ಕಾಲ ನಡೆಯುವ ಎರಡು ಅಧಿವೇಶನಗಳಲ್ಲಿ 5,000ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಲಹೆಗಾರರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ, ನಿವೃತ್ತರಾಗಲಿರುವ ಪ್ರಧಾನಿ ಲೀ ಕೆಕಿಯಾಂಗ್‌ ಅವರ ಉತ್ತರಾಧಿಕಾರಿ ಆಯ್ಕೆ ನಡೆಯಲಿದೆ.

ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಿಷ್ಠ ಲಿ ಕ್ವಿಯಾಂಗ್ ಅವರು ಕೆಕಿಯಾಂಗ್‌ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.