
ಬೀಜಿಂಗ್: ‘ಚೀನಾ ಈಸ್ಟರ್ನ್ ಏರ್‌ಲೈನ್ಸ್’ ಶಾಂಘೈ–ದೆಹಲಿ ನಡುವಿನ ಸಂಚಾರ ಸೇವೆಯನ್ನು ಭಾನುವಾರದಿಂದ ಪುನರಾರಂಭಿಸಿದ್ದು, ಶೇ 95ಕ್ಕಿಂತ ಹೆಚ್ಚು ಆಸನಗಳು ಭರ್ತಿಯಾಗಿದ್ದವು. ಐದು ವರ್ಷಗಳ ಬಳಿಕ ಭಾರತದ ಜತೆ ನೇರ ವಿಮಾನಯಾನ ಸೇವೆ ಪುನರಾರಂಭಿಸಿದ ಚೀನಾದ ಮೊದಲ ವಿಮಾನಯಾನ ಸಂಸ್ಥೆ ಇದಾಗಿದೆ.
248 ಪ್ರಯಾಣಿಕರನ್ನು ಹೊತ್ತ ಎಂಯು 563 ವಿಮಾನವು ಶಾಂಘೈನ ಪುಡಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತು ಎಂದು ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ಭಾರತೀಯ ವಿಮಾನಯಾನ ಸಂಸ್ಥೆ ‘ಇಂಡಿಗೊ’ ನವೆಂಬರ್ 10ರಿಂದ ದೆಹಲಿ–ಗ್ವಾಂಗ್‌ಝೌ ನಡುವಿನ ಸಂಚಾರ ಸೇವೆಯನ್ನು ಆರಂಭಿಸಲಿದೆ.
2020ರ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ನೇರ ವಿಮಾನಯಾನ ಸಂಪರ್ಕ ಕಡಿತಗೊಂಡಿತ್ತು. ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾದ್ದರಿಂದ ವಿಮಾನ ಸಂಚಾರ ಮತ್ತೆ ಆರಂಭವಾಗಿರಲಿಲ್ಲ. ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆಗಳ ಬಳಿಕ ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಪರಿಣಾಮವಾಗಿ ಕಳೆದ ಅಕ್ಟೋಬರ್ 26ರಂದು ಇಂಡಿಗೊ ವಿಮಾನವು ಕೋಲ್ಕತ್ತದಿಂದ ಚೀನಾದ ಗ್ವಾಂಗ್‌ಝೌನಲ್ಲಿ ಇಳಿಯಿತು. ಈ ಮೂಲಕ ಎರಡೂ ದೇಶಗಳ ನಡುವಿನ ವಿಮಾನ ಸಂಚಾರ ಪುನರಾರಂಭಕ್ಕೆ ಚಾಲನೆ ದೊರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.