ADVERTISEMENT

ಅಮೆರಿಕ–ತೈವಾನ್‌ ಮೇಲೆ ಕಠಿಣ ಪ್ರತೀಕಾರ: ಗುಡುಗಿದ ಚೀನಾ

ಪಿಟಿಐ
Published 3 ಆಗಸ್ಟ್ 2022, 20:45 IST
Last Updated 3 ಆಗಸ್ಟ್ 2022, 20:45 IST
   

ಬೀಜಿಂಗ್‌: ಕಠಿಣ ಎಚ್ಚರಿಕೆ ಲೆಕ್ಕಿಸದೇ ತೈವಾನ್‌ಗೆ ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ್ದಕ್ಕೆ ಕುಪಿತಗೊಂಡಿರುವ ಚೀನಾ, ‘ಒಂದೇ ಚೀನಾ ನೀತಿ’ ಉಲ್ಲಂ ಘಿಸಿರುವ ಅಮೆರಿಕ ಮತ್ತು ತೈವಾನ್‌ ವಿರುದ್ಧ ‘ಕಠಿಣ ಮತ್ತು ಪರಿಣಾಮಕಾರಿ’ ಪ್ರತೀಕಾರದ ಕ್ರಮ ತೆಗೆದುಕೊಳ್ಳುವುದಾಗಿ ಬುಧವಾರ ಗುಡುಗಿದೆ.

‘ಅಮೆರಿಕ ಪ್ರಚೋದಿಸುವ ರಾಷ್ಟ್ರ ವಾಗಿದೆ. ಇದಕ್ಕೆ ಚೀನಾ ಬಲಿಪಶು’ ಎಂದು ಚೀನಾ ವಿದೇಶಾಂಗ ಸಚಿವಾ ಲಯ ಕಿಡಿಕಾರಿದೆ. ತೈವಾನ್ ದ್ವೀಪದ ಸುತ್ತ ಸೇನಾ ತಾಲೀಮು ಘೋಷಣೆ, ಆಮದು– ರಫ್ತು ನಿಷೇಧ, ಅಮೆರಿಕದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದ ಜತೆಗೆ ಏನೆಲ್ಲಾ ಹೆಚ್ಚುವರಿ ಕ್ರಮ ತೆಗೆದುಕೊಳ್ಳಲಾಗುವುದೆಂಬ ಪ್ರಶ್ನೆಗಳಿಗೆ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಪ್ರತಿಕ್ರಿಯಿಸಿದರು.

ಪೆಲೋಸಿ ಮತ್ತು ತೈವಾನ್ ಅಧ್ಯಕ್ಷೆ ಸಾಯ್ ಇಂಗ್-ವೆನ್ ಅವರಿಗೆ ನಿರ್ಬಂಧ ಹೇರಲಾಗುವುದೇ ಎಂಬ ಮತ್ತೊಂದು ಪ್ರಶ್ನೆಗೆ ‘ಸ್ವಲ್ಪ ತಾಳ್ಮೆ ವಹಿಸಿ. ನಾವು ಹೇಳಿದ್ದನ್ನು ಮಾಡುತ್ತೇವೆ. ನಮ್ಮ ಪ್ರತ್ಯುತ್ತರ ಪರಿಣಾಮಕಾರಿಯಾಗಿರಲಿದೆ’ ಎಂದು ಹುವಾ ಗುಡುಗಿದರು.

ADVERTISEMENT

ತೈವಾನ್‌ ಭೇಟಿ ಯಶಸ್ವಿಯಾದ ನಂತರ ದಕ್ಷಿಣ ಕೊರಿಯಾಕ್ಕೆ ತೆರಳುವ ಮೊದಲು ಪೆಲೋಸಿ ಅವರು, ಜಾಗತಿಕ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಪ್ರತಿಜ್ಞೆ ಮಾಡಿದರು. ಪ್ರಜಾಪ್ರಭುತ್ವದಡಿ ಸ್ವತಂತ್ರ ಆಡಳಿತ ನಡೆಸುತ್ತಿರುವ ತೈವಾನ್ ಒಬ್ಬಂಟಿಯಲ್ಲ. ತೈವಾನ್‌ಗೆ ವಿಶ್ವ ನಾಯಕರ ಭೇಟಿಯನ್ನು ಚೀನಾದಿಂದ ತಡೆಯಲಾಗದು ಎಂದರು.

ಚೀನಾ, ತೈವಾನ್‌ ಸುತ್ತ ಸೇನಾ ತಾಲೀಮು, ಕ್ಷಿಪಣಿ ಪರೀಕ್ಷೆಯ ಘೋಷಿಸಿದ್ದು, ಬುಧವಾರ ಕೂಡ ತೈವಾನ್‌ ವಾಯು ರಕ್ಷಣಾ ಪ್ರದೇಶದಲ್ಲಿ ಚೀನಾದ 27 ಯುದ್ಧವಿಮಾನ
ಗಳು ಹಾರಾಟ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.