ADVERTISEMENT

ವಾಣಿಜ್ಯ ಸಮರ: ವಿದೇಶಿ ಕಂಪನಿಗಳಿಗೆ ಹಲವು ನಿರ್ಬಂಧ ವಿಧಿಸಿದ ಚೀನಾ

ಏಜೆನ್ಸೀಸ್
Published 19 ಸೆಪ್ಟೆಂಬರ್ 2020, 8:40 IST
Last Updated 19 ಸೆಪ್ಟೆಂಬರ್ 2020, 8:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಂಘೈ, ಬೀಜಿಂಗ್‌, ವಾಷಿಂಗ್ಟನ್‌: ಅಮೆರಿಕ ವಿಧಿಸಿರುವ ನಿರ್ಬಂಧಗಳಿಗೆ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ಚೀನಾ, ತನ್ನ ಹಿತಾಸಕ್ತಿಗೆ ಧಕ್ಕೆ ತರುವ ವಿದೇಶಿ ಕಂಪನಿಗಳಿಗೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸುವುದಾಗಿ ತಿಳಿಸಿದೆ.

ಇದು ಅಮೆರಿಕ ಮತ್ತು ಚೀನಾ ನಡುವಣ ಮತ್ತೊಂದು ವಾಣಿಜ್ಯ ಸಮರ ಎಂದೇ ವಿಶ್ಲೇಷಿಸಲಾಗುತ್ತಿದೆ. ದೂರಸಂಪರ್ಕ ಕ್ಷೇತ್ರದ ದೈತ್ಯ ಕಂಪನಿ ಹುವೈ ವಿರುದ್ಧ ಅಮೆರಿಕ ಕ್ರಮಕೈಗೊಂಡ ಬಳಿಕ ಚೀನಾ ಈ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ನಿರೀಕ್ಷಿಸಲಾಗಿತ್ತು.

ನಿರ್ದಿಷ್ಟವಾಗಿ ಯಾವ ವಿದೇಶಿ ಕಂಪನಿಗಳು ಎನ್ನುವುದನ್ನು ಚೀನಾದ ವಾಣಿಜ್ಯ ಸಚಿವಾಲಯವು ಪ್ರಸ್ತಾಪಿಸಿಲ್ಲ. ಆದರೆ, ರಫ್ತು ಮತ್ತು ಆಮದು ವಹಿವಾಟು, ಹೂಡಿಕೆಗೆ, ಉಪಕರಣಗಳು ಮತ್ತು ಕಂಪನಿಯ ಸಿಬ್ಬಂದಿಗೆ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಬಹುದು ಎಂದು ತಿಳಿಸಿದೆ. ಜತೆಗೆ, ವಿದೇಶಿ ಕಂಪನಿಗಳಿಗೆ ದಂಡವನ್ನು ಸಹ ವಿಧಿಸಬಹುದು ಎಂದು ಸಚಿವಾಲಯವು ತಿಳಿಸಿದೆ.

ADVERTISEMENT

ವಾಣಿಜ್ಯ ಸಚಿವಾಲಯದ ಪ್ರಸ್ತಾವದಲ್ಲಿ ‘ವಿದೇಶಿ ಕಂಪನಿಗಳು, ಇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು’ ಎಂದು ಉಲ್ಲೇಖಿಸಲಾಗಿದೆ.

ಚೀನಾದ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗೆ ಧಕ್ಕೆ ತರುವ ಕಂಪನಿಗಳು ಅಥವಾ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಪರಿಶೀಲಿಸಲಾಗುವುದು. ಜತೆಗೆ, ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧವೂ ಕ್ರಮಕೈಗೊಳ್ಳುವುದಾಗಿ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಕಾನೂನುಗಳನ್ನು ಉಲ್ಲಂಘಿಸಿರುವ ಬಗ್ಗೆ ಅನುಮಾನಗಳು ಮೂಡಿದರೆ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ರಾಷ್ಟ್ರೀಯ ಭದ್ರತೆ ಧಕ್ಕೆ ತರುವ ಆರೋಪದ ಮೇಲೆ ಅಮೆರಿಕ ಮಾರುಕಟ್ಟೆ ಪ್ರವೇಶಿಸದಂತೆ ಹುವೈ ಕಂಪನಿಗೆ ನಿಷೇಧ ವಿಧಿಸಲಾಗಿತ್ತು. ಜತೆಗೆ, ಹುವೈ ಕಂಪನಿ ಜತೆ ಅಮೆರಿಕ ಕಂಪನಿಗಳು ಯಾವುದೇ ರೀತಿ ವ್ಯಾಪಾರ ವಹಿವಾಟು ಮಾಡದಂತೆ ಸೂಚಿಸಲಾಗಿತ್ತು.

ತನ್ನ ದೂರಸಂಪರ್ಕ ಜಾಲವನ್ನು ಪಡೆಯಲು ಹುವೈ ಕಂಪನಿಯನ್ನು ಚೀನಾದ ಭದ್ರತಾ ಇಲಾಖೆ ಬಳಸಿಕೊಳ್ಳುವ ಸಾಧ್ಯತೆ ಎಂದು ಅಮೆರಿಕ ಹೇಳಿತ್ತು.

‘ಹುವೈ ಕಂಪನಿ ಬೇಹುಗಾರಿಕೆ ನಡೆಸುತ್ತಿದೆ. ಆ ಕಂಪನಿಯ ಉಪಕರಣಗಳು ನಮಗೆ ಬೇಕಿಲ್ಲ. ನಮ್ಮ ದೇಶದ ರಹಸ್ಯ ಮಾಹಿತಿಗಳನ್ನು ಕದಿಯಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಅಮೆರಿಕದ ಆರೋಪಗಳನ್ನು ಚೀನಾ ಮತ್ತು ಹುವೈ ಕಂಪನಿ ನಿರಾಕರಿಸಿದ್ದವು. ಈ ಬಗ್ಗೆ ಅಮೆರಿಕ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದು ತಿಳಿಸಿದ್ದವು.

ಟಿಕ್‌ಟಾಕ್‌ ಮತ್ತು ವೀ ಚಾಟ್‌ ಆ್ಯಪ್‌ಗಳಿಗೂ ಅಮೆರಿಕ ನಿಷೇಧ ಹೇರಿದೆ. ಅಮೆರಿಕದ ಈ ಕ್ರಮವು ಸಹ ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಆ್ಯಪಲ್‌, ಸಿಸ್ಕೊ ಸಿಸ್ಟಮ್ಸ್‌, ಕ್ವಾಲ್ಕಾಮ್‌ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಚೀನಾ ಈಗ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ ಬೋಯಿಂಗ್‌ ಕಂಪನಿಯಿಂದ ಯುದ್ಧ ವಿಮಾನಗಳನ್ನು ಸಹ ಖರೀದಿಸುವುದನ್ನು ಸಹ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.