ADVERTISEMENT

ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 5:49 IST
Last Updated 3 ಜನವರಿ 2026, 5:49 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ನವದೆಹಲಿ: ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಶಮನದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿದ್ದ ಚೀನಾವನ್ನು ಪಾಕಿಸ್ತಾನ ಬೆಂಬಲಿಸಿದೆ.

ಆ ಸಮಯದಲ್ಲಿ ಚೀನಾ ನಾಯಕರು ನಮ್ಮ ಸಂಪರ್ಕದಲ್ಲಿದ್ದರು. ಅಂತೆಯೇ, ಭಾರತದ ಜೊತೆ ಸಂಪರ್ಕ ಸಾಧಿಸಿದ್ದರು ಎಂಬುದಾಗಿ ಪಾಕಿಸ್ತಾನ ಹೇಳಿದ್ದಾಗಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ADVERTISEMENT

ವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ತಹಿರ್ ಅಂದ್ರಾಬಿ, ಮೇ 6 ಮತ್ತು ಮೇ 10ರ ನಡುವೆ ಚೀನಾದ ನಾಯಕರು ಎರಡೂ ದೇಶಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ಮಾತುಕತೆಗಳು ಪರಿಸ್ಥಿತಿಯನ್ನು ಶಾಂತಗೊಳಿಸಲು ಮತ್ತು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.

‘ಬಹಳ ಸಕಾರಾತ್ಮಕ ರಾಜತಾಂತ್ರಿಕ ವಿನಿಮಯಗಳಿಂದ ಕೂಡಿದ್ದ ಮಾತುಕತೆಗಳು, ಉದ್ವಿಗ್ನತೆ ತಗ್ಗಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಶಾಂತಿ ಹಾಗೂ ಭದ್ರತೆಯನ್ನು ಖಚಿತಪಡಿಸುವಲ್ಲಿ ಸಹಾಯ ಮಾಡಿವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಚೀನಾದ ಮಧ್ಯಸ್ಥಿಕೆ ಸರಿಯಾಗಿತ್ತು ಎಂದು ನನಗೆ ಅನಿಸುತ್ತದೆ’ಎಂದು ಅಂದ್ರಾಬಿ ಹೇಳಿದ್ದಾರೆ.

ನಾಲ್ಕು ದಿನಗಳ ಸಂಘರ್ಷದಲ್ಲಿ ಚೀನಾದ ಮಧ್ಯಸ್ಥಿಕೆ ಕುರಿತಾದ ಹೇಳಿಕೆಯನ್ನು ಪಾಕಿಸ್ತಾನವು ಸಾರ್ವಜನಿಕವಾಗಿ ಬೆಂಬಲಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಯುದ್ಧ ವಿರಾಮ ಕುರಿತ ಶ್ರೇಯವನ್ನು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಮಾತ್ರ ನೀಡಿದ್ದರು.

ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಶಮನದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಪದೇ ಪದೇ ತಳ್ಳಿಹಾಕುತ್ತಿದ್ದು, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮನವಿ ಮೇರೆಗೆ ಯುದ್ಧ ವಿರಾಮ ಘೋಷಿಸಲಾಯಿತು ಎಂದು ಹೇಳಿದೆ. ಬಿಕ್ಕಟ್ಟು ಶಮನದಲ್ಲಿ ನಮ್ಮ ಪಾತ್ರವಿತ್ತು ಎಂಬ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆಯನ್ನೂ ಭಾರತ ತಳ್ಳಿ ಹಾಕಿದೆ.

ಪಾಕಿಸ್ತಾನವು ಚೀನಾದ ದೃಷ್ಟಿಕೋನವನ್ನು ಒಪ್ಪಿಕೊಂಡಿತ್ತು. ಅವರ ಪ್ರಯತ್ನಗಳು ಶಾಂತಿ, ಸಮೃದ್ಧಿ, ಭದ್ರತೆಗಾಗಿ ಆಗಿತ್ತು ಎಂದು ಅಂದ್ರಾಬಿ ಬಣ್ಣಿಸಿದ್ದಾರೆ.

ಆ ಮೂರ್ನಾಲ್ಕು ದಿನದ ಸಂಘರ್ಷದ ಸಮಯದಲ್ಲಿ ಶಾಂತಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆದವು. ಅದರ ಭಾಗವಾಗಿ ಚೀನಾವು ಮಧ್ಯಸ್ಥಿಕೆ ವಹಿಸಿತ್ತು ಎಂಬ ಅದರ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆ ಬೆಂಬಲಿಸುತ್ತೇವೆ ಎಂದು ಅಂದ್ರಾಬಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.