ADVERTISEMENT

ತೈವಾನ್‌ನತ್ತ ಯುದ್ಧನೌಕೆಗಳನ್ನು ಕಳುಹಿಸಿದ ಚೀನಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 13:06 IST
Last Updated 10 ಏಪ್ರಿಲ್ 2023, 13:06 IST
.
.   

ತೈಪೆ (ಎಪಿ): ತೈವಾನ್‌ ಅಧ್ಯಕ್ಷೆ ಅಮೆರಿಕ ಪ್ರವಾಸ ಕೈಗೊಂಡಿದ್ದಕ್ಕೆ ಪ್ರತೀಕಾರವಾಗಿ ಸೇನಾ ತಾಲೀಮು ನಡೆಸಲು ಚೀನಾ ಸೇನೆಯು ಹೆಚ್ಚಿನ ಪ್ರಮಾಣದಲ್ಲಿ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳನ್ನು ತೈವಾನ್‌ನತ್ತ ಕಳುಹಿಸಿದೆ. ‌

ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಮೂರು ದಿನಗಳ ಸೇನಾ ತಾಲೀಮು ಆರಂಭಿಸಿರುವುದಾಗಿ ಈ ಹಿಂದೆ ಚೀನಾ ಸೇನೆ ಘೋಷಿಸಿತ್ತು.

ತೈವಾನ್‌ ಸ್ವಾತಂತ್ರ್ಯವನ್ನು ಬಯಸುವ ಪ್ರಜೆಗಳು ವಿದೇಶಿ ಅಧಿಕಾರಿಗಳನ್ನು ಭೇಟಿಯಾಗುವುದು ಯುದ್ಧಕ್ಕೆ ದಾರಿ ಮಾಡಿಕೊಡಲಿದೆ ಎಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಹೇಳಿದೆ.

ADVERTISEMENT

ಯುದ್ಧದ ಸಂದರ್ಭದಲ್ಲಿ ತೈವಾನ್ ಸುತ್ತಲೂ ಸಮುದ್ರ ಮತ್ತು ವಾಯು ಸಂಚಾರವನ್ನು ಚೀನಾ ನಿರ್ಬಂಧಿಸಬಹುದು. ಅಮೆರಿಕ, ಜಪಾನ್ ಮತ್ತು ಇತರ ರಾಷ್ಟ್ರಗಳು ಮಧ್ಯ ಪ್ರವೇಶಿಸುವುದುನ್ನು ಅಥವಾ ದ್ವೀಪ ರಾಷ್ಟ್ರದ ನೆರವಿಗೆ ಧಾವಿಸುವುದನ್ನು ತಡೆಯಬಹುದು ಎಂದು ಮಿಲಿಟರಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಅಮೆರಿಕ ಸಂಸತ್ತಿನ ಕೆಳ ಮನೆಯ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದ್ದಕ್ಕೆ ಪ್ರತೀಕಾರವಾಗಿ ಚೀನಾದ ಇತ್ತೀಚಿನ ಮಿಲಿಟರಿ ಕ್ರಮಗಳು ನಡೆದಿವೆ.

ಅಮೆರಿಕ ಕಾಂಗ್ರೆಸ್ ನಿಯೋಗ ಸಹ ತೈವಾನ್‌ನಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿತು.

ಸೋಮವಾರ ಬೆಳಿಗ್ಗೆ ಚೀನಾದ ಸೇನೆಯು (ಪೀಪಲ್ಸ್‌ ಲಿಬರೇಷನ್‌ ಆರ್ಮಿ–ಪಿಎಲ್‌ಎ) ತನ್ನ ಶಾಂಡೊಂಗ್ ವಿಮಾನವಾಹಕ ನೌಕೆಯು ಮೊದಲ ಬಾರಿಗೆ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿದೆ ಎಂದು ಹೇಳಿದೆ.

ಭಾನುವಾರ ಬೆಳಿಗ್ಗೆ 6 ರಿಂದ ಸೋಮವಾರ ಬೆಳಿಗ್ಗೆ 6 ರ ನಡುವೆ ಒಟ್ಟು 70 ವಿಮಾನಗಳು ಕಂಡು ಬಂದಿವೆ ಮತ್ತು ಅರ್ಧದಷ್ಟು ತೈವಾನ್ ಜಲಸಂಧಿಯ ಮಧ್ಯಭಾಗ ದಾಟಿವೆ. ಇದು ಒಂದು ಕಾಲದಲ್ಲಿ ಎರಡೂ ಕಡೆಯವರು ಒಪ್ಪಿಕೊಂಡ ಅನಧಿಕೃತ ಗಡಿಯಾಗಿದೆ ಎಂದು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಶುಕ್ರವಾರ ಮತ್ತು ಶನಿವಾರ ಎಂಟು ಯುದ್ಧನೌಕೆಗಳು ಮತ್ತು 71 ವಿಮಾನಗಳು ತೈವಾನ್ ಬಳಿ ಪತ್ತೆಯಾಗಿವೆ. ‘ಸಂಘರ್ಷ ಹೆಚ್ಚಿಸಬಾರದು ಮತ್ತು ವಿವಾದ ಉಂಟು ಮಾಡಬಾರದು’ ಎಂಬ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ದ್ವೀಪದ ರಕ್ಷಣಾ ಸಚಿವಾಲಯ ತಿಳಿಸಿದೆ.

ಭೂ-ಆಧಾರಿತ ಕ್ಷಿಪಣಿ ವ್ಯವಸ್ಥೆ ಮತ್ತು ನೌಕಾಪಡೆ ಹಡಗುಗಳ ಮೂಲಕ ಚೀನಾದ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ತೈವಾನ್ ಹೇಳಿದೆ.

1949ರ ಯುದ್ಧದ ನಂತರ ಚೀನಾ ಮತ್ತು ತೈವಾನ್‌ ಪ್ರತ್ಯೇಕವಾಗಿವೆ. ದ್ವೀಪ ರಾಷ್ಟ್ರ ತೈವಾನ್‌ನಲ್ಲಿ ಸ್ವಾಯತ್ತ ಆಡಳಿತ ಇದ್ದರೂ ಅದು ಈವರೆಗೆ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿಲ್ಲ. ತೈವಾನ್‌ ದ್ವೀಪವು ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.